ತಮ್ಮ ಮನೆ ಗೃಹಪ್ರವೇಶಕ್ಕೆ ಗೈರಾದ ಸಿದ್ದರಾಮಯ್ಯ
ಮೈಸೂರು: ವಾಚ್ ವಿವಾದದಿಂದ ಹೈರಾಣಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ತಾಲ್ಲೂಕಿನ ಸಿದ್ದರಾಮನಹುಂಡಿಯಲ್ಲಿ ನಡೆದ ಅವರ ನೂತನ ನಿವಾಸದ ಗೃಹಪ್ರವೇಶದಲ್ಲಿ ಪಾಲ್ಗೊಂಡಿರಲಿಲ್ಲ.
ಕಳೆದ ತಿಂಗಳು ಅಂದರೆ ಫೆ. 28 ಮತ್ತು 29ಕ್ಕೆ ನಿಗದಿಯಾಗಿದ್ದ ಗೃಹಪ್ರವೇಶವನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಗ್ರಾಮದಲ್ಲಿ ಈಗ ಸಿದ್ದರಾಮೇಶ್ವರ ಮತ್ತು ಚಿಕ್ಕಮ್ಮ ತಾಯಿ ಜಾತ್ರೆ ಆರಂಭವಾಗಿದ್ದು, ಎರಡೂ ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ನಿವಾಸದ ಗೃಹಪ್ರವೇಶವನ್ನು ಪುರೋಹಿತರು ಪೂಜಾವಿಧಿಗಳ ಮೂಲಕ ನಡೆಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರ ಪತ್ನಿ ಪಾರ್ವತಿ ಅವರು ಮನೆಯಲ್ಲಿ ಹಾಲು ಉಕ್ಕಿಸಿ ಧಾರ್ಮಿಕ ವಿಧಿ ನೆರವೇರಿಸಿದರು.
ಪುತ್ರರಾದ ರಾಕೇಶ್ ಸಿದ್ದರಾಮಯ್ಯ, ಯತೀಂದ್ರ ಪಾಲ್ಗೊಂಡಿದ್ದರು ಎನ್ನಲಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ. ಕುಟುಂಬಸ್ಥರನ್ನು ಬಿಟ್ಟು ಬೇರೆ ಯಾರನ್ನೂ ಆಹ್ವಾನಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

