
ಬೆಂಗಳೂರು: ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಎರಡು ಜೀವಗಳು ಉಳಿದಿರುವ ಘಟನೆ ಬೆಂಗಳೂರಿನ ಬೆನ್ನಿಗಾನಹಳ್ಳಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಮಾನವರಹಿತ ಕ್ರಾಸಿಂಗ್ ಇರುವ ಪ್ರದೇಶದಲ್ಲಿ ಓರ್ವ ಮಹಿಳೆ ತನ್ನ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧವಾಗಿದ್ದಳು, ಸುಮಾರು ಮಧ್ಯಾಹ್ನ 2 :30 ರ ವೇಳೆಗೆ ಬೆನ್ನಿಗಾನಹಳ್ಳಿಯಲ್ಲಿರುವ ಮಾನವ ರಹಿತ ಕ್ರಾಸಿಂಗ್ ಬಳಿ ಬಂದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲು ಚಾಲಕನಿಗೆ ಆತ್ಮಹತ್ಯೆಗೆ ಸಿದ್ಧವಾಗಿದ್ದ ಮಹಿಳೆ ಕಾಣಿಸಿಕೊಂಡಿದ್ದಾಳೆ. ತಕ್ಷಣವೇ ರೈಲು ಚಾಲಕ ರೈಲಿನ ತುರ್ತು ಬ್ರೇಕ್ ಬಳಸಿ ರೈಲನ್ನು ನಿಲ್ಲಿಸಿದ್ದಾನೆ.
28 ವರ್ಷದ ಮಹಿಳೆ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವುದಕ್ಕೆ ಮಹಿಳೆಯ ಪ್ರಿಯಕರ ಜಗದೀಶ್ ವಂಚಿಸಿದ್ದೇ ಕಾರಣ. 28 ವರ್ಷದ ಮಹಿಳೆ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಜಗದೀಶ್ ಪರಸ್ಪರ ಪ್ರೀತಿಸುತ್ತಿದ್ದರು. ವಿವಾಹವಾಗುವುದಾಗಿ ನಂಬಿಸಿದ್ದ ಪ್ರೇಮಿ ಜಗದೀಶ್, ಆಕೆ ಗರ್ಭಿಣಿಯೆಂದು ತಿಳಿಯುತ್ತಿದ್ದಂತೆ ಮದುವೆ ಪ್ರಸ್ತಾಪವನ್ನು ಮುಂದೂಡಿದ್ದಾನೆ. ಆದರೆ ಮಗು ಹುಟ್ಟಿದ ನಂತರವೂ ವಿವಾಹವಾಗಲು ಒಪ್ಪದೇ ಇದ್ದ ಕಾರಣ ನೊಂದ ಯುವತಿ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.
ರೈಲನ್ನು ನಿಲ್ಲಿಸಿರುವ ಬಗ್ಗೆ ಎರಡು ರೀತಿಯ ಹೇಳಿಕೆಗಳು ಕೇಳಿಬಂದಿದೆ. ಸ್ಥಳೀಯ ಪೊಲೀಸರ ಪ್ರಕಾರ, ಗೇಟ್ ಬಳಿ ಇದ್ದ ರೈಲ್ವೆ ಸಿಬ್ಬಂದಿ ಮಹಿಳೆಯ ಅನುಮಾನಾಸ್ಪದ ವರ್ತನೆಯನ್ನು ಶಂಕಿಸಿ, ಪ್ರಶಾಂತಿ ರೈಲು ಚಾಲಕನಿಗೆ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಎರಡೂ ಜೀವಗಳು ಉಳಿದಿವೆ. ಚಾಲಕ ಟ್ರ್ಯಾಕ್ ಮೇಲೆ ಮಹಿಳೆಯನ್ನು ನೋಡಿದ ಕೂಡಲೇ ತುರ್ತು ಬ್ರೇಕ್ ನ್ನು ಬಳಸಿ ರೈಲನ್ನು ನಿಲ್ಲಿಸಿದ್ದಾನೆ ಎಂದು ರೈಲ್ವೆ ಸಿಬ್ಬಂದಿಗಳು ಹಾಗೂ ರೈಲ್ವೆ ಪೊಲೀಸ್ ಪಡೆ ಹೇಳಿದೆ.
Advertisement