
ಬೆಂಗಳೂರು: ಸಾಮಾನ್ಯವಾಗಿ ಪರೀಕ್ಷೆ ಬರೆಯುವವರು ವಾಚು ಕಟ್ಟಿರುತ್ತಾರೆ. ಎಷ್ಟು ಸಮಯವಾಯಿತು? ಇನ್ನು ಎಷ್ಟು ಹೊತ್ತು ಉಳಿದಿದೆ ಎಂದೆಲ್ಲಾ ನೋಡಲು ಪರೀಕ್ಷೆ ಸಮಯದಲ್ಲಿ ವಾಚು ಬೇಕಾಗುತ್ತದೆ.
ಆದರೆ ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜುಗಳ ವಿದ್ಯಾರ್ಥಿಗಳು ಇನ್ನು ಮುಂದೆ ಪರೀಕ್ಷೆ ಬರೆಯುವಾಗ ವಾಚು ಕಟ್ಟುವ ಹಾಗಿಲ್ಲ. ಮೇ 2ರಂದು ಸೆಮಿಸ್ಟರ್ ಪರೀಕ್ಷೆ ಆರಂಭವಾಗುತ್ತಿದ್ದು, ಇಲ್ಲಿ ಈ ನಿಯಮ ಜಾರಿಗೆ ಬರಲಿದೆ.
ಈ ಹಿಂದಿನ ಪರೀಕ್ಷೆಗಳಲ್ಲಿ ಅನೇಕ ಅಕ್ರಮಗಳು ದಾಖಲಾದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ವಿಶ್ವವಿದ್ಯಾಲಯದ ಮೌಲ್ಯಮಾಪನದ ರಿಜಿಸ್ಟ್ರಾರ್ ಡಾ.ಕೆ.ಎನ್. ನಿಂಗೇಗೌಡ, ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಾಚು ಕಟ್ಟಿಕೊಂಡು ಬರಲು ಬಿಡುವುದಿಲ್ಲ. ಅವರಿಗೆ ಸಮಯ ಗೊತ್ತಾಗಲು ಪರೀಕ್ಷಾ ಹಾಲ್ ನ ಗೋಡೆಯ ಮೇಲೆ ಗೋಡೆ ಗಡಿಯಾರವನ್ನು ನೇತು ಹಾಕುತ್ತೇವೆ. ಕೇವಲ ಸ್ಮಾರ್ಟ್ ವಾಚುಗಳನ್ನು ಮಾತ್ರವಲ್ಲದೆ ಇತರೆ ಸಾಮಾನ್ಯ ವಾಚುಗಳನ್ನು ಸಹ ಕಟ್ಟಲು ಬಿಡುವುದಿಲ್ಲ ಎಂದು ತಿಳಿಸಿದರು.
ಗೋಡೆ ಗಡಿಯಾರ ತೆಗೆದುಕೊಳ್ಳಲು ಕಾಲೇಜುಗಳಿಗೆ ವಿಪರೀತ ಹೊರೆಯಾಗುವುದಿಲ್ಲ. ಮಾರುಕಟ್ಟೆಯಲ್ಲಿ 200-300 ರೂಪಾಯಿಗೆ ಗಡಿಯಾರಗಳು ಸಿಗುತ್ತವೆ. ಪ್ರತಿ ಕಾಲೇಜಿಗೆ 8ರಿಂದ 10 ಗೋಡೆ ಗಡಿಯಾರಗಳು ಬೇಕಾಗಬಹುದು ಎಂದರು.
ಪರೀಕ್ಷೆ ಸಂದರ್ಭದಲ್ಲಿ ಯಾರಾದರೂ ವಿದ್ಯಾರ್ಥಿಗಳು ವಾಚು ಕಟ್ಟಿಕೊಂಡು ಬಂದಿರುವುದು ಗೊತ್ತಾದರೆ ವಾಚನ್ನು ಕಳಚಿ ಪಕ್ಕದ ಆಫೀಸು ರೂಂನಲ್ಲಿ ಅಥವಾ ಗೇಟಿನ ಬಳಿ ಸೆಕ್ಯೂರಿಟಿ ಬಳಿ ನೀಡಿ ಪರೀಕ್ಷೆ ಮುಗಿಸಿ ಹೊರಬಂದ ಮೇಲೆ ಪಡೆದುಕೊಳ್ಳಬೇಕು.
ಇತರರು ಅನುಸರಿಸುತ್ತಾರೆಯೇ?: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಉಪನ್ಯಾಸಕರ ನೇಮಕಾತಿ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಕೂಡ ಇತ್ತೀಚೆಗೆ ಅಭ್ಯರ್ಥಿಗಳಿಗೆ ವಾಚು ಕಟ್ಟುವುದನ್ನು ಬಿಟ್ಟಿರಲಿಲ್ಲ. ಬೇರೆ ವಿಶ್ವವಿದ್ಯಾಲಯಗಳು ಕೂಡ ಈ ನಿಯಮವನ್ನು ಅನುಸರಿಸಲು ಪ್ರಯತ್ನಿಸುತ್ತಿವೆ. ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಟಿಡಿ ಕೆಂಪರಾಜು ಮಾತನಾಡಿ, ಇದೊಂದು ಉತ್ತಮ ಕ್ರಮ. ನಾನು ಕೂಡ ಈ ಕುರಿತ ಪ್ರಸ್ತಾವನೆಯನ್ನು ಶೈಕ್ಷಣಿಕ ಸಮಿತಿ ಮತ್ತು ಸಿಂಡಿಕೇಟ್ ಮುಂದಿಡುತ್ತೇನೆ ಎಂದರು.
ಪೂರ್ವಭಾವಿ ಕ್ರಮ: ಇದುವರೆಗೆ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ನಡೆದ ಅಕ್ರಮಗಳಲ್ಲಿ ಯಾವ ವಿದ್ಯಾರ್ಥಿ ಕೂಡ ಸ್ಮಾರ್ಟ್ ವಾಚನ್ನು ಬಳಸಿ ನಕಲು ಮಾಡಿ ಸಿಕ್ಕಿಬಿದ್ದಿಲ್ಲ. ಆದರೂ ಕೂಡ ಇದು ಮುನ್ನೆಚ್ಚರಿಕೆಯ ಪೂರ್ವಭಾವಿ ಕ್ರಮ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Advertisement