ನಷ್ಟದಲ್ಲಿ ಮೈಸೂರಿನ ಪಾರಂಪರಿಕ ಹೋಟೆಲ್ ಲಲಿತ್ ಮಹಲ್ ಪ್ಯಾಲೇಸ್

ದೇಶದ 15 ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಲಲಿತ್ ಮಹಲ್ ಪ್ಯಾಲೇಸ್ ಕೂಡ ಒಂದು. ಇಂತಹ ಐತಿಹಾಸಿಕ ಹೋಟೆಲ್ ಈಗ ನಷ್ಟದಲ್ಲಿದೆ...
ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್
ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್

ಬೆಂಗಳೂರು: ಪ್ರತಿ ವರ್ಷ ಸುಮಾರು 2.5 ಮಿಲಿಯನ್ ಪ್ರವಾಸಿಗರು ಜಗತ್ ಪ್ರಸಿದ್ಧ ಮೈಸೂರಿನ ಅಂಬಾ ವಿಲಾಸ ಅರಮನೆಗೆ ಭೇಟಿ ನೀಡುತ್ತಾರೆ. ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಕೂಡ  ಅರಮನೆಯಷ್ಟೇ ಪ್ರಸಿದ್ದಿ ಪಡೆದಿದೆ.

ಕೇಂದ್ರ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ನಿರ್ವಹಿಸುತ್ತಿರುವ ದೇಶದ 15 ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಲಲಿತ್ ಮಹಲ್ ಪ್ಯಾಲೇಸ್ ಕೂಡ ಒಂದು. ಇಂತಹ ಐತಿಹಾಸಿಕ ಹೋಟೆಲ್ ಈಗ ನಷ್ಟದಲ್ಲಿದೆ.

ಕಳೆದ ಮೂರು ವರ್ಷಗಳಿಂದ ನಷ್ಟದ ಹೊರೆಯಲ್ಲಿಯೇ ಲಲಿತ್ ಮಹಲ್ ಪ್ಯಾಲೇಸ್ ಮುಳುಗಿದೆ. 2012-13 ರಲ್ಲಿ 78.11 ಲಕ್ಷ, 2013-14 ರಲ್ಲಿ 1.17 ಕೋಟಿ ರು. ನಷ್ಟ, 2014-15 ರ ಆರ್ಥಿಕ ವರ್ಷದಲ್ಲಿ 1.40 ಕೋಟಿ ನಷ್ಟ ಅನುಭವಿಸಿರುವುದು ದಾಖಲಾಗಿದೆ.

ಐಟಿಡಿಸಿ ಅಡಿಯಲ್ಲಿ ಬರುವ ಎಲ್ಲಾ ಹೋಟೆಲ್ ಗಳಿಗೆ  ಕೇಂದ್ರ ಇಲ್ಲ ರಾಜ್ಯ ಸರ್ಕಾರ ಭೂಮಿಯನ್ನು ಗುತ್ತಿಗೆ ನೀಡುತ್ತದೆ. ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಗೆ ರಾಜ್ಯ ಸರ್ಕಾರ ಭೂಮಿ ನೀಡಿದೆ.

ಮಾರ್ಚ್ 16 ರಂದು ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಪ್ರವಾಸೋದ್ಯಮ ಇಲಾಖೆ ಬೇಡಿಕೆಗೆ ತಕ್ಕಂತೆ ಕೊಠಡಿಗಳ ಸೌಲಭ್ಯ ಸಿಗುತ್ತಿಲ್ಲ. 6ನೇ ವೇತನ ಆಯೋಗದ ಅನುಷ್ಠಾನದಂತೆ ಸಿಬ್ಬಂದಿಯ ಸಂಬಳ ಹೆಚ್ಚಾಗಿದೆ. ಜೊತೆಗೆ  ಕೊಠಡಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಅಗತ್ಯ ಪ್ರಮಾಣದ ಕೊಠಡಿ ಪೂರೈಕೆಯಾಗುತ್ತಿಲ್ಲವಾದ್ದರಿಂದ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ನಷ್ಟ ಅನುಭವಿಸುತ್ತಿದೆ ಎಂದು ಹೇಳಿದೆ.

ಇನ್ನು ಹೆಚ್ಚಿನ ಕೊಠಡಿ ನಿರ್ಮಾಣ, ಇಲ್ಲವೇ ಮತ್ತಷ್ಟು ಹೋಟೆಲ್ ಗಳ ನಿರ್ಮಾಣ ಮಾಡುವ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಸ್ಪಷ್ಟಪಡಿಸಿದೆ.

ಹೋಟೆಲ್ ಗಳ ಯಶಸ್ಸಿಗೆ ಸಾಂಸ್ಥಿಕ ಸಾಮರ್ಥ್ಯವೂ ಕಾರಣವಾಗುತ್ತದೆ. ಮೈಸೂರಲ್ಲಿ ಪ್ರವಾಸಿಗರಿಗೆ ಕೊರತೆ ಇಲ್ಲ. ಆದರೆ ಹೊಟೆಲ್ ಕೊಠಡಿ ಬಾಡಿಗೆ ತುಂಬಾ ಹೆಚ್ಚು. ಪಾರಂಪರಿಕ ಕಟ್ಟಡವಾದ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣಾ ವೆಚ್ಚ ಕೂಡ ಅಧಿಕವಾಗಿರುವುದರಿಂದ ನಷ್ಟಕ್ಕೆ ಕಾರಣವಾಗಿರಬಹುದು ಎಂದು ಕರ್ನಾಟಕ ರಾಜ್ಯ ಹೋಟೆಲ್  ಸಂಘದ ಅಧ್ಯಕ್ಷ ರಾಜೇಂದ್ರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com