
ಹುಬ್ಬಳ್ಳಿ: ದೇಶದಲ್ಲಿ ಎರಡು ಲಕ್ಷ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುರಿ ಇದ್ದು, ಆದಷ್ಟು ಬೇಗ ಗುರಿ ಸಾಧನೆ ಮಾಡಲಾಗುವುದು ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 218 ರಸ್ತೆ ಬಲವೃದ್ಧಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಧಾರವಾಡ ಜಿಲ್ಲೆ ಹಾಗೂ ಅವಳಿ ನಗರಕ್ಕೆ ಭರಪೂರ ಕೊಡುಗೆಗಳನ್ನು ಘೋಷಣೆ ಮಾಡಿದರು.
ಹುಬ್ಬಳ್ಳಿ ನಗರದಲ್ಲಿ ಸಿಮೆಂಟ್ ರಸ್ತೆಗಳ ನಿರ್ಮಾಣಕ್ಕೆ 625 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. ಅದರ ಜೊತೆಗೆ ಬಹು ದಿನಗಳ ಬೇಡಿಕೆಯಾದ ಕಿತ್ತೂರು ಚೆನ್ನಮ್ಮ ವೃತ್ತ ಹಾಗೂ ಧಾರವಾಡ ಜುಬ್ಲಿ ಸರ್ಕಲ್ ನಲ್ಲಿ ಪ್ಲೈ ಓವರ್ ನಿರ್ಮಾಣಕ್ಕೆ 300 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡುವುದಾಗಿ ಘೋಷಣೆ ಮಾಡಿದರು.
ದೇಶದ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವುದು ಕೇಂದ್ರ ಸರ್ಕಾದ ಮುಖ್ಯ ಧ್ಯೇಯವಾಗಿದ್ದು, ರಸ್ತೆ ಕಾಮಗಾರಿಗಳಲ್ಲಿ 5 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬೇಲೆಕೇರಿ ಬಂದರು ನಿರ್ಮಾಣ ಮಾಡುವುದು ಅವಶ್ಯವಾಗಿದ್ದು, ಬೇಲೆಕೇರಿ ಬಂದರು ನಿರ್ಮಾಣಕ್ಕೆ 50 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದರು.
ಜಲ ಸಾರಿಗೆಯಿಂದ ಹೆಚ್ಚಿನ ಲಾಭ ಗಳಿಸುವ ಉದ್ದೇಶ ಹೊಂದಲಾಗಿದ್ದು, 9 ನದಿಗಳಲ್ಲಿ ಜಲ ಸಾರಿಗೆಯನ್ನು ಪ್ರಾರಂಭ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದಕ್ಕಾಗಿ ನೀಲ ನಕ್ಷೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದರು. ಕರ್ನಾಟಕದ ಎಲ್ಲಾ ಬೇಡಿಕೆಗಳಿಗೂ ಕೇಂದ್ರ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದ್ದು, ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್, ಸಚಿವರಾದ ಹೆಚ್.ಸಿ. ಮಹಾದೇವಪ್ಪ, ವಿನಯ ಕುಲಕರ್ಣಿ, ಮಾಜಿ ಸಿಎಂ ಜನದೀಶ್ ಶೆಟ್ಟರ್, ಸಂಸದರಾದ ಪ್ರಹಾದ್ ಜೋಶಿ, ಪಿ.ಸಿ. ಗದ್ದಿಗೌಡರ, ರಮೇಶ ಜಿಗಜಿಣಗಿ, ಸಂಗಣ್ಣ ಕರಡಿ, ಶಾಸಕರಾದ ಕೋನರೆಡ್ಡಿ, ಬಸವರಾಜ್ ಹೊರಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Advertisement