
ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಈಗಾಗಲೇ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ತಪ್ಪಿತಸ್ಛರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯ ಪಡಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆ ದೊಡ್ಡ ಆಘಾತ. ಈ ಘಟನೆ ನಡೆಯಬಾರದಿತ್ತು. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬಾರದು. ತಪ್ಪಿತಸ್ಥರನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಮರುಪರೀಕ್ಷೆ ನಡೆಯಲಾಗುವುದು ಹಾಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಯಾವೆಲ್ಲ ಅಧಿಕಾರಿಗಳು ಭಾಗಿಯಾಗಿದ್ದಾರೆಯೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಪರೀಕ್ಷಾ ವಿಭಾಗದ ಯಾವೆಲ್ಲ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಪತ್ತೆ ಹಚ್ಚಲಾಗುವುದು ಎಂದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವಿಧಾನಸಭೆಯಲ್ಲಿ ಮಾತನಾಡಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ.ಪಕೀಕ್ಷಾ ವಿಭಾಗದ ಎಲ್ಲಾ ಅಧಿಕಾರಿಗಳನ್ನು ಬದಲಾಯಿಸಲು ಸೂಚನೆ ನೀಡಿದ್ದೇನೆ ಎಂದರು.
ಪ್ರಶ್ನೆ ಪತ್ರಿಕೆ ಸೋರಿಕೆ ಒಂದು ದೊಡ್ಡ ಅನಾಹುತ. ಇದರ ನೈತಿಕ ಹೊಣೆಯನ್ನು ನಾನು ಹೊರಲು ಸಿದ್ಧನಿದ್ದೇನೆ. ಆದರೆ ಇದಕ್ಕೆ ಪಿಯು ಮಂಡಳಿಯ ನಿರ್ದೇಶಕಿ ಮತ್ತು ಅಧಿಕಾರಿಗಳೇ ನೇರ ಹೊಣೆ ಎಂದು ಅವರು ಆಪಾದಿಸಿದರು.ಇಂದು ಸಂಜೆ ವೇಳೆಗೆ ಮತ್ತೆ ಪರೀಕ್ಷಾ ದಿನಾಂಕವನ್ನು ಪ್ರಕಟಿಸುವುದಾಗಿ ಹೇಳಿದರು.
ಕಿಮ್ಮನೆ ರತ್ನಾಕರ್ ಅವರ ಹೇಳಿಕೆಗೆ ತೃಪ್ತರಾಗದ ಪ್ರತಿಪಕ್ಷ ನಾಯಕರು, ಸಚಿವರು
ಸಿದ್ಧಪಡಿಸಿರುವ ಉತ್ತರ ನೀಡುವುದು ಬೇಡ. ತಮ್ಮ ತಪ್ಪುಗಳನ್ನು ಸಚಿವರು ಮುಚ್ಚಲು ಯತ್ನಿಸುತ್ತಿದ್ದಾರೆ. ಕಾರಣಕರ್ತರಾದವರನ್ನು ಪತ್ತೆ ಹಚ್ಚಿ ಸಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಈ ಮಧ್ಯೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ್ ತುಂಗಾ ಅವರ ಕೈವಾಡವಿದ್ದು, ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯ ಕೇಳಿಬರುತ್ತಿದೆ.
Advertisement