ಬೆಂಗಳೂರು: ದ್ವಿತೀಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪಿಯು ಮಂಡಳಿಯ ಇಬ್ಬರು ಸಿಬ್ಬಂದಿಗಳು ಭಾಗಿಯಾಗಿದ್ದಾರೆಂದು ಪ್ರಕರಣದ ಕಿಂಗ್ ಪಿನ್ ಶಿವಕುಮಾರಸ್ವಾಮಿ ಅಲಿಯಾಸ್ ಗೂರೂಜಿ ಹೇಳಿದ್ದಾರೆ.
ಮಂಗಳವಾರ ಬಂಧಿತನಾಗಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್ ಪಿನ್ ಎನ್ನಲಾಗುತ್ತಿರುವ ಶಿವಕುಮಾರಸ್ವಾಮಿ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದರು. ಈ ವೇಳೆ ಬಾಯ್ಬಿಟ್ಟ ಶಿವಕುಮಾರಸ್ವಾಮಿ, ಪ್ರಶ್ನೆ ಪತ್ರಿಕೆಯನ್ನು ಹೊರ ತೆಗೆಯಲು ಸಹಾಯ ಮಾಡಿದ್ದು ಪಿಯು ಮಂಡಳಿಯ ಇಬ್ಬರು ಗ್ರೂಪ್ ಡಿ ನೌಕರರು ಎಂದು ಹೇಳಿದ್ದಾನೆ.
ಓಬಳೇಶ ಮತ್ತು ಬಸವರಾಜು ಎಂಬ ಇಬ್ಬರು ಪ್ರಶ್ನೆ ಪತ್ರಿಕೆ ತೆಗೆಯಲು ಸಹಾಯ ಮಾಡುತ್ತಿದ್ದರು. ಇವರಿಬ್ಬರು ಸಹೋದರರು. ಓಬಳೇಶ ರಾಜಿನಾಮೆ ನೀಡಿದ್ದು, ಆತನ ಸಹೋದರ ಬಸವರಾಜು ಇನ್ನು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನನ್ನ ಅಣ್ಣನ ಮಗ ಕಿರಣ್ ಕುಮಾರ್ ಅಲಿಯಾಸ್ ಕುಮಾರಸ್ವಾಮಿಗೆ ಬಸವರಾಜ್ ಪ್ರಶ್ನೆ ಪತ್ರಿಕೆ ನೀಡಿದ್ದು.
ಅಲ್ಲದೇ, ಓಬಳೇಶನ ಪತ್ನಿಯು ಪಿಯು ಮಂಡಳಿಯಲ್ಲಿ ಗ್ರೂಪ್ ಡಿ ಸಿಬ್ಬಂದಿಯಾಗಿದ್ದು, ಆಕೆಯು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ ಎಂದ ಅವನು, ಕಿರಣ್ ನಿಂದ ಇಬ್ಬರು ಸಹೋದರರು ಸಾಕಷ್ಟು ಹಣ ಪಡೆಯುತ್ತಿದ್ದರು ಎಂದು ತಿಳಿಸಿದ್ದಾನೆ.
ಇಷ್ಟೆಲ್ಲಾ ಮಾಹಿತಿ ನೀಡಿರುವ ಗೂರೂಜಿ, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಆರೋಪವನ್ನು ತಳ್ಳಿಹಾಕಿದ್ದು, ಈ ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಕಿರಣ್ ಮತ್ತು ಇಬ್ಬರು ಡಿ ಗ್ರೂಪ್ ನೌಕರರು ಭಾಗಿಯಾಗಿದ್ದಾರೆ ಎಂದು ಹೇಳಿದ್ದಾನೆ.
ಈ ಇಬ್ಬರು ಸಹೋದರರು ಪ್ರಶ್ನೆ ಪತ್ರಿಕೆಯನ್ನು ಕದ್ದು ಕೂಡಲೇ ಕಿರಣ್ ಗೆ ಕರೆ ಮಾಡಿ ಟಮೋಟಾ ಸಿಕ್ಕಿದೆ ಎಲ್ಲಿಗೆ ಬರಬೇಕು ಎಂದು ತಿಳಿಸುತ್ತಿದ್ದರಂತೆ. ನಂತರ ಆ ಕಡೆಯಿಂದ ಮಾತನಾಡಿ ಸ್ಥಳ ಗುರುತು ಮಾಡುತ್ತಿದ್ದ. ಅಲ್ಲಿ ಎಲ್ಲಾ ವ್ಯವಹಾರ ಕುದುರಿಸುತ್ತಿದ್ದರು. ಬಹುತೇಕ ಗಾಂಧಿನಗರದ ಹೋಟೆಗಳಲ್ಲೇ ವ್ಯವಹಾರ ಮಾಡುತ್ತಿದ್ದರು ಎಂದು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.