
ಬೆಂಗಳೂರು: ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ವಾಸಿ ಅಂತ ಭಾವಿಸುತ್ತಾರಂತೆ ಬಹುತೇಕ ದಂಪತಿಗಳು. ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆಯಂತೆ. ಅದರಲ್ಲೂ ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳನ್ನು ದತ್ತು ತೆಗೆದುಕೊಳ್ಳುವವರ ಲಿಂಗಾನುಪಾತದಲ್ಲಿ ಭಾರೀ ಅಂತರವಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯ ಅಧಿಕಾರಿಗಳು.
2013-14ರಲ್ಲಿ ಬೆಂಗಳೂರಿನಲ್ಲಿ ದತ್ತು ಪಡೆದುಕೊಂಡ ಹೆಣ್ಣು ಮಕ್ಕಳ ಸಂಖ್ಯೆ 33 ಇದ್ದರೆ ಗಂಡು ಮಕ್ಕಳ ಸಂಖ್ಯೆ 17. 2014-15ರಲ್ಲಿ ಅದು 37-13 ಆಗಿದೆ. ನಗರದಲ್ಲಿ ಯುವ ದಂಪತಿಗಳು ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ಒಲವು ತೋರಿಸುತ್ತಾರೆ. ಹೆಣ್ಣು ಮಕ್ಕಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಆಸ್ಪತ್ರೆಗಳಲ್ಲಿ ಮತ್ತು ನರ್ಸಿಂಗ್ ಹೋಂಗಳಲ್ಲಿ ಹುಟ್ಟಿರುವ ಅನಾಥ ಹೆಣ್ಣು ಮಕ್ಕಳನ್ನು ವಿಶೇಷ ದತ್ತು ಕೇಂದ್ರಗಳಿಗೆ ನೀಡುವಂತೆ ಮಹಿಳಾ ಮತ್ತು ಮಕ್ಕಳ ನಿರ್ದೇಶನಾಲಯ ನಿರ್ದೇಶನ ನೀಡಲು ಕಾರ್ಯ ಯೋಜನೆಯನ್ನು ರೂಪಿಸುತ್ತಿದೆ.
30ರಿಂದ 35 ವರ್ಷದೊಳಗಿನ ದಂಪತಿಗಳು 2 ವರ್ಷಕ್ಕಿಂತ ಕಿರಿಯ ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಕೇಳುತ್ತಾರೆ. ಅವರ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಒಬ್ಬ ಅಧಿಕಾರಿ.
ಮದುವೆಯಾದ ದಂಪತಿ 5 ವರ್ಷಗಳವರೆಗೆ ಮಕ್ಕಳಾಗುತ್ತದೆಯೇ ಎಂದು ಕಾಯುತ್ತಾರೆ. ಮತ್ತೆ ಕೂಡ ಆಗದಿದ್ದರೆ ದತ್ತು ಪಡೆಯುತ್ತಾರೆ. ಅವರಿಗೆ ವಯಸ್ಸಾದಾಗ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಭಾವಿಸುವವವರೇ ಅಧಿಕ ಮಂದಿ. ಹೀಗಾಗಿ ಹೆಣ್ಣು ಮಕ್ಕಳನ್ನು ದತ್ತು ಪಡೆಯುವವರ ಸಂಖ್ಯೆ ಹೆಚ್ಚು ಎನ್ನುತ್ತಾರೆ.
ದತ್ತು ಸ್ವೀಕಾರ ಹೆಚ್ಚಳ: ಕರ್ನಾಟಕ ರಾಜ್ಯಾದ್ಯಂತ ದತ್ತು ಪಡೆಯುವ ದಂಪತಿ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಆನ್ ಲೈನ್ ನಲ್ಲಿ ದತ್ತು ಪಡೆಯುವ ಪ್ರಕ್ರಿಯೆಯನ್ನು ಜಾರಿಗೆ ತಂದ ನಂತರ ತಾಂತ್ರಿಕ ತೊಂದರೆಗಳಿಂದಾಗಿ ಸ್ವಲ್ಪ ನಿಧಾನವಾಗುತ್ತಿತ್ತು. ಈಗ ಅದನ್ನು ಸುವ್ಯವಸ್ಥೆಗೆ ತರಲಾಗಿದೆ. www.cara.nic.in.karnataka ಎಂಬ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ವೆಬ್ ಸೈಟ್ 27 ವಿಶೇಷ ದತ್ತು ಸಂಸ್ಥೆಗಳನ್ನು ಒಳಗೊಂಡಿದೆ.
Advertisement