
ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ ಪೈಯಿಂಗ್ ಗೆಸ್ಟ್ ಮಾಲೀಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಸಬ್ ಇನ್ಸ್ಪೆಕ್ಟರ್ ಪೊಲೀಸರ ಅತಿಥಿಯಾಗಿದ್ದಾನೆ.
ಕೋಲಾರ ಜಿಲ್ಲೆ ಮುಳಬಾಗಿಲಿನ ಪ್ರದೀಪ್ (25) ಬಂಧಿತ ಯುವಕ. ಎಸ್ಸೈ ಆಗುವ ಕನಸು ಕಂಡಿದ್ದ ಪ್ರದೀಪ್ ಕಳೆದ ವರ್ಷ ಎಸ್ಸೈ ನೇಮಕಾತಿಗೆ ಪರೀಕ್ಷೆ ಬರೆದಿದ್ದನಾದರೂ ಆಯ್ಕೆಯಾಗಿ ಇರಲಿಲ್ಲ. ಆದರೆ, ತನ್ನ ಪಾಲಕರು, ಊರಿನ ಜನರು ಮತ್ತು ಸ್ನೇಹಿತರಿಗೆ ತಾನು ಎಸ್ಸೈ ಹುದ್ದೆಗೆ ಆಯ್ಕೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದ.
ತರಬೇತಿಗೆ ಹೋಗುತ್ತಿರುವುದಾಗಿ ಪಾಲಕರಿಗೆ ಹೇಳಿ ನಗರಕ್ಕೆ ಬಂದು ಕೆ.ಆರ್. ಪುರ ಸಮೀಪದ ಭಟ್ಟರಹಳ್ಳಿ ಯಲ್ಲಿರುವ ಪೇಯಿಂಗ್ ಗೆಸ್ಟ್ ನಲ್ಲಿ ಕಳೆದ ಮೂರು ವರ್ಷಗಳಿಂದ ವಾಸಿಸುತ್ತಿದ್ದನು.
ಸಬ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡೇ ಕೋಲಾರದಲ್ಲಿ ಸಮವಸ್ತ್ರ ಹೊಲಿಸಿಕೊಂಡಿದ್ದ. ಪಿಜಿ ಮಾಲೀಕ ಹಾಗೂ ಅಕ್ಕಪಕ್ಕದ ನಿವಾಸಿಗಳಿಗೂ ಎಸ್ಸೈ ಎಂದೇ ಪರಿಚಯಿಸಿಕೊಂಡಿದ್ದ. ಎಸ್ಸೈ ಸಮವಸ್ತ್ರ ಧರಿಸಿ ಓಡಾಡುತ್ತಿದ್ದರಿಂದ ಯಾರಿಗೂ ಅನುಮಾನ ಬಂದಿರಲಿಲ್ಲ.
ಪೊಲೀಸ್ ಡ್ರೆಸ್ ಧರಿಸಿ ಬೆಳಗ್ಗೆ ಹೊರಡುತ್ತಿದ್ದ ಪ್ರದೀಪ್, ಪಿಜಿ ಮಾಲೀಕರು, ಅಂಗಡಿಗಳು, ಫುಟ್ಪಾತ್ ವ್ಯಾಪಾರಿಗಳನ್ನು ಹೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದ. ಭಟ್ಟರಹಳ್ಳಿ ಸುತ್ತಮುತ್ತಲ ಜನರಿಗೆ ತಾನು ಹಲಸೂರು ಠಾಣೆ ಎಸ್ಸೈ ಎಂದು ಹೇಳುತ್ತಿದ್ದ. ಬೇರೆ ಪ್ರದೇಶಕ್ಕೆ ಹೋದಾಗ ಕೆ.ಆರ್. ಪುರ ಠಾಣೆ ಎಸ್ಸೈ ಎಂದು ಪರಿಚಯಿಸಿಕೊಳ್ಳುತ್ತಿದ್ದ.
ಪಿಜಿ ಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತದ್ದೀರಾ ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಬುಧವಾರ ಭಟ್ಟರ ಹಳ್ಳಿಯ ಪಿಜಿಗೆ ಬಂದು ಮಾಲೀಕರನ್ನು ಬೆದರಿಸುತ್ತಿದ್ದ ವೇಳೆ ಎಚಚ್ಚರಗೊಂಡ ಸ್ಥಳೀಯರು ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ ಆತ, ಸುಲಭವಾಗಿ ಹಣ ಸಂಪಾದಿಸಲು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ. ಬಂಧಿತ ಪ್ರದೀಪ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
Advertisement