
ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂ. 4 ರಂದು ಸಾಮೂಹಿಕ ರಜೆ ಹಾಕಲು ಪೊಲೀಸ್ ಪೇದೆಗಳು ನಿರ್ಧರಿಸಿದ್ದಾರೆ.
ಪೊಲೀಸರು ಇದೇ ಮೊದಲ ಬಾರಿಗೆ ಸಾಮೂಹಿಕವಾಗಿ ರಜೆ ಹಾಕುವ ಮೂಲಕ ಸರ್ಕಾರದ ಧೋರಣೆ ವಿರುದ್ಧ ತಿರುಗಿಬೀಳಲು ಮುಂದಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಪರಮೇಶ್ವರ್ ಅವರಲ್ಲಿ ತಳಮಳ ಉಂಟುಮಾಡಿದೆ.
ಅಗತ್ಯವಸ್ತುಗಳ ಬೆಲೆ ಏರಿಕೆ ಗಗನಮುಖಿಯಾಗಿರುವುದರಿಂದ ತಮಗೆ ದೊರೆಯುತ್ತಿರುವ ಕಡಿಮೆ ವೇತನದಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ. ಜತೆಗೆ ರಜೆಗಳೇ ಇಲ್ಲದೆ ಕುಟುಂಬ ಸದಸ್ಯರಿಗೆ ದೂರವಾಗಿ ಎಷ್ಟೋ ಸಲ ಕೆಲಸ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಕ್ಕೆ 15 ಗಂಟೆಗಳ ಕಾಲ ಕೆಲಸ ಮಾಡಿದರೂ ಹಿರಿಯ ಅಧಿಕಾರಿಗಳ ಕಿರುಕುಳ ತಪ್ಪಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಪರಿಹಾರ ಕಂಡು ಹಿಡಿಯಬೇಕು ಎಂಬುದು ಮುಷ್ಕರ ನಡೆಸಲು ನಿರ್ಧರಿಸಿರುವ ಪೊಲೀಸ್ ಪೇದೆಗಳ ಒತ್ತಾಯವಾಗಿದೆ.
ಜೀವದ ಹಂಗನ್ನು ತೊರೆದು ಹಲವು ಬಾರಿ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಜೀವಕ್ಕೆ ಅಪಾಯ ಒದಗಿರುವ ಸಂದರ್ಭಗಳೂ ಇವೆ. ತೊಂದರೆಗೀಡಾದ ಸಹೋದ್ಯೋಗಿ ಬಂಧುಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ರಕ್ಷಣೆ ಒದಗಿಸುವಲ್ಲಿ ಮೇಲಾಧಿಕಾರಿಗಳು ವಿಫಲವಾಗಿದ್ದಾರೆ. ಸರ್ಕಾರ ಕೂಡ ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಪರಿಸ್ಥಿತಿ ಹೀಗಿರುವಾಗ ಅನಿವಾರ್ಯವಾಗಿ ಸಾಮೂಹಿಕ ರಜೆ ಹಾಕಬೇಕಾಗಿದೆ ಎಂದು ಪೊಲೀಸರು ತಮ್ಮ ಅಂತರಾಳದ ನೋವನ್ನು ವ್ಯಕ್ತಪಡಿಸಿದ್ದಾರೆ.
ಈಗಾಗಲೇ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿನ ಸಿಬ್ಬಂದಿ ಸಾಮೂಹಿಕ ರಜೆಗೆ ಅರ್ಜಿ ಹಾಕುವ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ. ಸಹಸ್ರಾರು ಅರ್ಜಿಗಳು ಈಗಾಗಲೇ ಠಾಣಾ ಮೇಲಾಧಿಕಾರಿಗಳ ಕೈಸೇರಿವೆ..
Advertisement