
ಬೆಂಗಳೂರು: ಬ್ರೆಡ್, ಬನ್, ಪಿಜ್ಜಾ, ಬರ್ಗರ್‌ಗಳಲ್ಲಿ ಕ್ಯಾನ್ಸರ್‌ಕಾರಕ ಬ್ರೋಮೇಟ್ ಅಂಶಗಳಿರುವ ಆಘಾತಕಾರಿ ಅಂಶವನ್ನು ವಿಜ್ಞಾನ ಮತ್ತು ಪರಿಸರ ಕೇಂದ್ರ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಅವುಗಳ ಮಾದರಿಗಳನ್ನು ಪರೀಕ್ಷೆ ನಡೆಸುವಂತೆ ಆಹಾರ ಸುರಕ್ಷತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ರಾಜ್ಯದ ಆಹಾರ ಸುರಕ್ಷತೆ ಅಧಿಕಾರಿಗಳಿಗೆ ಈ ಕುರಿತು ಆದೇಶ ನೀಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್, ಸರ್ಕಾರಿ ಸ್ವಾಮ್ಯದ ಪ್ರಯೋಗಾಲಯದಲ್ಲಿ ಬ್ರೆಡ್ ಮತ್ತಿತರ ಪದಾರ್ಥಗಳ ಮಾದರಿಗಳನ್ನು ಪರೀಕ್ಷೆಗೊಳಪಡಿಸಿ ಶೀಘ್ರದಲ್ಲಿಯೇ ವರದಿ ನೀಡುವಂತೆ ತಿಳಿಸಿದ್ದಾರೆ.
ಬ್ರೆಡ್ ಪದಾರ್ಥಗಳಲ್ಲಿ ರೋಗಕಾರಕ ಅಂಶಗಳು ಇರುವ ಕುರಿತು ಪರೀಕ್ಷೆ ನಡೆಸುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರದ ಆಹಾರ ಸುರಕ್ಷತೆ ಪ್ರಾಧಿಕಾರ ಸೂಚನೆ ನೀಡಬೇಕಾಗಿತ್ತು. ಆದರೆ, ಕೇಂದ್ರದಿಂದ ಯಾವುದೇ ಸೂಚನೆ ಬಾರದ ಕಾರಣ ರಾಜ್ಯ ಆರೋಗ್ಯ ಇಲಾಖೆಯೇ ಸ್ವಯಂ ಪ್ರೇರಿತವಾಗಿ ಬ್ರೆಡ್ ಪದಾರ್ಥಗಳ ಮಾದರಿಗಳನ್ನು ಪರೀಕ್ಷೆಗೊಳಪಡಿಸಲು ನಿರ್ಧರಿಸಿದೆ.
ಪ್ರಯೋಗಾಲಯ ನೀಡುವ ವರದಿಯನ್ನು ಮತ್ತೂಮ್ಮೆ ರಾಷ್ಟ್ರೀಯ ಮಾನ್ಯತೆ ಪಡೆದಿರುವ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುವುದು. ತರುವಾಯ ಎರಡು ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Advertisement