ರಾಜ್ಯದ ಜನತೆಗೆ ಲೋಕಾಯುಕ್ತ ಮೇಲೆ ಇನ್ನೂ ನಂಬಿಕೆ ಇದೆ: ಸುಭಾಷ್ ಆಡಿ

ಉಪ ಲೋಕಾಯುಕ್ತರಾಗಿ ನ್ಯಾ. ಸುಭಾಷ್ ಬಿ. ಆಡಿ ಸೋಮವಾರ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ. ಮಾರ್ಚ್ 3 ರಂದು ಕೈಗೊಂಡಿದ್ದ ಪದಚ್ಯುತಿ ನಿರ್ಣಯವನ್ನು ಕೈಬಿಡುವಂತೆ...
ಸುಭಾಷ್ ಆಡಿ
ಸುಭಾಷ್ ಆಡಿ

ಬೆಂಗಳೂರು: ಉಪ ಲೋಕಾಯುಕ್ತರಾಗಿ ನ್ಯಾ. ಸುಭಾಷ್ ಬಿ. ಆಡಿ ಸೋಮವಾರ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ. ಮಾರ್ಚ್ 3 ರಂದು ಕೈಗೊಂಡಿದ್ದ ಪದಚ್ಯುತಿ ನಿರ್ಣಯವನ್ನು ಕೈಬಿಡುವಂತೆ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಆಡಿ ಮತ್ತೆ ಉಪ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ತಮ್ಮ ಸಂಬಂಧಿಕರಿಗೆ ಹಾಗೂ ಆಪ್ತರಿಗೆ ಸಹಾಯ ಮಾಡಿದ್ದ ಆರೋಪದಲ್ಲಿ ತನಿಖಾ ಸಮಿತಿಯಿಂದ ಕ್ಲೀನ್ ಚಿಟ್ ಪಡೆದಿರುವ ಸುಭಾಷ್ ಆಡಿ, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆಗೆ ತಮ್ಮ ಹಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ.

ರಾಜ್ಯಸರ್ಕಾರ ಲೋಕಾಯುಕ್ತ ಸಂಸ್ಥೆಗೆ ಬದಲು ಭ್ರಷ್ಟಚಾರ ವಿರೋಧಿ ಮಂಡಳಿ(ಎಸಿಬಿ) ಸ್ಥಾಪಿಸಿದ್ದರೂ ರಾಜ್ಯದ ಜನತೆಗೆ ಇನ್ನೂ ಲೋಕಾಯುಕ್ತ ಸಂಸ್ಥೆ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ನನ್ನ ಆತ್ಮ ಸಾಕ್ಷಿಗೆ ತಿಳಿದಿತ್ತು, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹಾಗಾಗಿ ತನಿಖಾ ಸಮಿತಿಯ ವಿಚಾರಣೆಯನ್ನು ಧೈರ್ಯವಾಗಿ ಎದುರಿಸಿದೆ. ಜೊತೆಗೆ ನನ್ನ ವಿರುದ್ದ ನಿಲುವಳಿ ಸೂಚನೆ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಕಾನೂನು ಸಮರ ಸಾರಿದೆ ಎಂದು ಅವರು ಹೇಳಿದ್ದಾರೆ.

ಎಸಿಬಿ ಸ್ಥಾಪನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಾಯುಕ್ತ ವನ್ನು ವಿಸರ್ಜಿಸಿದ ಸಂಬಂಧ ನನಗೆ ಇದುವರೆಗೆ ಯಾವುದೇ ನೋಟಿಸ್ ಸಿಕ್ಕಿಲ್ಲ. ಹಾಗಾಗಿ ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ ಎಂದು ಹೇಳಿದ್ದಾರೆ.

ಕರ್ನಾಟಕ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ಸಂಸ್ಥೆಗಳು ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಸಾಕಷ್ಟು ಅಧಿಕಾರವನ್ನು ಹೊಂದಿವೆ. ಜನತೆ ಇನ್ನೂ ಲೋಕಾಯುಕ್ತ ಸಂಸ್ಥೆ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಆಡಿ ತಿಳಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಇತರ ಉಪಲೋಕಾಯುಕ್ತರೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇನೆ. ಕಳೆದ ಎರಡು ತಿಂಗಳ ಸಮಯದಲ್ಲಿ ನಡೆದಿರುವ ಎಲ್ಲಾ ಘಟಾನವಳಿಗಳನ್ನು ಪರಿಶೀಲಿಸಿ ನಂತರ ಮುಂದಿನ ಹೆಜ್ಜೆ ಇಡುವುದಾಗಿ ಅವರು ಹೇಳಿದ್ದಾರೆ.

ನನ್ನ ವಿರುದ್ದ ದೂರು ನೀಡಿದ್ದವರು ನಾನು ವಾಪಸ್ ಬಂದ ಮೇಲೆ ನನಗೆ ಶುಭಾಷಯ ಹೇಳಿದ್ದಾರೆ. ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬಹುದೋ ಅದನ್ನು ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com