ಮೈಸೂರು: ಪೆಟ್ರೋಲ್ ಬಂಕ್ ನಲ್ಲಿ ಇಂಧನ ಮಿಶ್ರಣ; ನೂರಾರು ವಾಹನಗಳಲ್ಲಿ ದೋಷ

ಇಲ್ಲಿನ ಟಿ.ನರಸೀಪುರ ರಸ್ತೆಯಲ್ಲಿರುವ ಮೇಗಲಾಪುರ ಗ್ರಾಮದಲ್ಲಿರುವ ಪೆಟ್ರೋಲ್ ಸ್ಟೇಷನ್ ನಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಇಲ್ಲಿನ ಟಿ.ನರಸೀಪುರ ರಸ್ತೆಯಲ್ಲಿರುವ ಮೇಗಲಾಪುರ ಗ್ರಾಮದಲ್ಲಿರುವ ಪೆಟ್ರೋಲ್ ಸ್ಟೇಷನ್ ನಲ್ಲಿ ವಾಹನಕ್ಕೆ ಇಂಧನವನ್ನು ಪೂರೈಸಿಕೊಂಡ ನಂತರ ಅನೇಕ ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳಲ್ಲಿ ತಾಂತ್ರಿಕ ದೋಷ ಅನುಭವಿಸಿದರು. ಕೆಲವರ ವಾಹನ ಕೆಟ್ಟು ಹೋಯಿತು. ಡೀಸೆಲ್ ಮತ್ತು ಪೆಟ್ರೋಲ್ ಮಿಶ್ರಣ ಮಾಡಿದ್ದು ಕಾರಣ ಎಂದು ಹೇಳಲಾಯಿತು.
ದ್ವಿಚಕ್ರ ವಾಹನ ಸವಾರರು ಹೇಳುವ ಪ್ರಕಾರ, ಮೊನ್ನೆ ಸೋಮವಾರ ರಾತ್ರಿ ಇಂಧನ ತುಂಬಿಸಿಕೊಂಡು ಕೆಲವು ಕಿಲೋ ಮೀಟರ್ ವರೆಗೆ ಹೋದ ನಂತರ ಬಿಳಿ ಹೊಗೆ ಬರಲಾರಂಭಿಸಿತು. ನಂತರ ಸ್ವಲ್ಪ ದೂರ ಹೋದ ಮುಂದೆ ಗಾಡಿ ತನ್ನಷ್ಟಕ್ಕೆ ನಿಂತಿತು. ಪೆಟ್ರೋಲ್, ಡೀಸೆಲ್ ಮಿಶ್ರಣ ಮಾಡಿದ್ದರಿಂದ ಹೀಗಾಗಿದೆ ಎಂದು 100ಕ್ಕೂ ಹೆಚ್ಚು ಬೈಕ್ ಸವಾರರು ಪೆಟ್ರೋಲ್ ಸ್ಟೇಷನ್ ಮುಂದೆ ಪ್ರತಿಭಟನೆ ನಡೆಸಿದರು.
ತಮ್ಮ ಗಾಡಿ ರಿಪೇರಿ ಮಾಡಿಕೊಡಬೇಕೆಂದು ಅನೇಕ ವಾಹನ ಸವಾರರು ನಿನ್ನೆ ಬೆಳಗ್ಗೆ ಪ್ರತಿಭಟನೆ ನಡೆಸಿದರು. ಮೈಸೂರು-ಟಿ.ನರಸೀಪುರ ರಸ್ತೆಯನ್ನು ಕೆಲ ಹೊತ್ತು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಆ ಬಳಿಕ ತಿಳಿದು ಬಂದದ್ದೇನೆಂದರೆ, ಭೂಮಿಯೊಳಗಿನ ಟ್ಯಾಂಕ್ ಹಾಳಾಗಿದ್ದು ಮೊನ್ನೆ ಸೋಮವಾರ ರಾತ್ರಿ ಇಂಧನವನ್ನು ತುಂಬಿಸುವಾಗ ಪೆಟ್ರೋಲ್ ಮತ್ತು ಡೀಸೆಲ್ ಮಿಶ್ರಣವಾಗಿ ದ್ವಿಚಕ್ರ ವಾಹನ ಸವಾರರ ವಾಹನಗಳಿಗೆ ತೊಂದರೆಯುಂಟಾಗಿದೆ.
ಪೆಟ್ರೋಲ್ ಬಂಕ್ ನ ಮಾಲಿಕರು ಎಲ್ಲಾ ವಾಹನಗಳನ್ನು ರಿಪೇರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಪೆಟ್ರೋಲಿಯಂ ಅಧಿಕಾರಿಗಳು ಇಂಧನ ಟ್ಯಾಂಕ್ ಗಳ ತಪಾಸಣೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com