
ಬೆಳಗಾವಿ: ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ದಿನ ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಿದ್ದ ಬೆಳಗಾವಿ ಪಾಲಿಕೆ ಮೇಯರ್ ಸರಿತಾ ಪಾಟೀಲ್ ಹಾಗೂ ಉಪಮೇಯರ್ ಸಂಜಯ್ ಶಿಂಧೆ ನಾಪತ್ತೆಯಾಗಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿರುವ ಬೆಳಗಾವಿ ಜಿಲ್ಲೆಯಿಂದ ನಗರ ಮೊದಲ ಹಾಗೂ ಎರಡನೇ ಪ್ರಜೆಗಳಾದ ಈ ಇಬ್ಬರೂ ಪಾಲಿಕೆ ಆವರಣದಿಂದ ಸರ್ಕಾರಿ ವಾಹನದ ಜೊತೆ ನಾಪತ್ತೆಯಾಗಿದ್ದಾರೆ ಎಂದು ಆಯುಕ್ತರ ತಿಳಿಸಿದ್ದಾರೆ.
ಮೇಯರ್ ಹಾಗೂ ಉಪಮೇಯರ್ ಮತ್ತು ಅವರ ಚಾಲಕರುಗಳ ಮೊಬೈಲ್ ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾಗಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಜೊತೆ ಸಂಪರ್ಕ ಹೊಂದಿರುವ ಮೇಯರ್ ಹಾಗೂ ಉಪ ಮೇಯರ್ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 1 ರಂದು ಕರ್ನಾಟರ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಮೇಯರ್ ಹಾಗೂ ಉಪ ಮೇಯರ್, ಕನ್ನಡ ಪರ ಸಂಘಟನೆಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತವೆ. ಜೊತೆಗೆ ತಮ್ಮ ಮುಖಕ್ಕೆ ಮಸಿ ಬಳಿಯುತ್ತಾರೆ ಎಂಬ ಭಯದಿಂದ ಬೆಳಗಾವಿಯಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ಕರ್ನಾಟಕ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದಾರೆ. ರಾಜ್ಯದ ವಿರುದ್ಧ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಈ ಇಬ್ಬರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.
Advertisement