ಕೊಲೆಯಾದ ತಿಮ್ಮೇಗೌಡ
ಕೊಲೆಯಾದ ತಿಮ್ಮೇಗೌಡ

ಮೂವರು ದುಷ್ಕರ್ಮಿಗಳಿಂದ ಬಿಜೆಪಿ ಮುಖಂಡನ ಕೊಲೆ

ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬಿಜೆಪಿ ಮುಖಂಡರೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ...
Published on
ಬೆಂಗಳೂರು: ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬಿಜೆಪಿ ಮುಖಂಡರೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಸುಂಕದಕಟ್ಟೆ ಸಮೀಪ ಕಾಮಾಕ್ಷಿಪಾಳ್ಯದ ಹೆಗ್ಗನಹಳ್ಳಿ ಕ್ರಾಸ್ ಹತ್ತಿರವಿರುವ ಮೋಹನ್ ಚಿತ್ರಮಂದಿರದ ಬಳಿ ನಿನ್ನೆ ತಡರಾತ್ರಿ ನಡೆದಿದೆ.
ಲಗ್ಗೆರೆ ನಿವಾಸಿ ಮಾಗಡಿ ಮೂಲದ ಚಿಕ್ಕ ತಿಮ್ಮೇಗೌಡ ಕೊಲೆಯಾದ ವ್ಯಕ್ತಿ. ಇವರು ಸ್ಥಳೀಯ ಬಿಬಿಎಂಪಿ ಕಾರ್ಪೊರೇಟರ್ ಗೆ ನಿಕಟವರ್ತಿಯಾಗಿದ್ದರು ಎಂದು ಹೇಳಲಾಗುತ್ತಿದ್ದು, ರಿಯಲ್ ಎಸ್ಟೇಟ್ ವ್ಯಾಪಾರ ಮತ್ತು ನಿರ್ಮಾಣ ಗುತ್ತಿಗೆ ಕಾಮಗಾರಿ ನಡೆಸುತ್ತಿದ್ದರು. ಇವರು ಎರಡು ತಿಂಗಳ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. 
ತಿಮ್ಮೇಗೌಡ ಹೆಗ್ಗನಹಳ್ಳಿ ಕ್ರಾಸ್ ಬಳಿ ನೂತನ ಮನೆ ನಿರ್ಮಿಸಿದ್ದು ಅದರ ಗೃಹ ಪ್ರವೇಶ ಕಾರ್ಯಕ್ರಮ ನಾಳೆ ನಡೆಯುವುದರಲ್ಲಿತ್ತು. ಗೃಹ ಪ್ರವೇಶದ ಆಮಂತ್ರಣ ನೀಡಲು ಸ್ನೇಹಿತ ನಾಗಣ್ಣ ಜೊತೆ ಬೈಕ್ ನಲ್ಲಿ ಹೋಗಿದ್ದರು. ಪತ್ರಿಕೆ ನೀಡಿ ರಾತ್ರಿ ಮನೆಗೆ ಹಿಂತಿರುಗಿ ಬರುತ್ತಿದ್ದಾಗ ಬೈಕ್ ವೊಂದರಲ್ಲಿ ಬಂದ ಮೂವರು ದುಷ್ಕರ್ಮಿಗಳು ಹೆಗ್ಗನಹಳ್ಳಿಯ ಮೋಹನ್ ಚಿತ್ರಮಂದಿರದ ಬಳಿ ತಿಮ್ಮೇಗೌಡರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಆಗ ತಿಮ್ಮೇಗೌಡರು ಕೆಳಗೆ ಬಿದ್ದರು. ಈ ವೇಳೆ ದುಷ್ಕರ್ಮಿಗಳು ತಿಮ್ಮೇಗೌಡರ ಎದೆಗೆ 6 ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಆರೋಪಿಗಳು ತಿಮ್ಮೇಗೌಡರ ಮೇಲೆ ಹಲ್ಲೆ ನಡೆಸುವಾಗ ಸ್ನೇಹಿತ ನಾಗಣ್ಣ ತಡೆಯಲು ಯತ್ನಿಸಿದರಾದರೂ ಸಾಧ್ಯವಾಗಿಲ್ಲ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಿಮ್ಮೇಗೌಡರನ್ನು ನಾಗಣ್ಣ ಮತ್ತು ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. 
ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಳೆ ದ್ವೇಷ ಅಥವಾ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ವಿವಾದ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com