ಟ್ಯಾಕ್ಸಿ ಸೇವೆ ನಿಯಂತ್ರಣಕ್ಕಾಗಿ ರಾಜ್ಯಸರ್ಕಾರದ ನಿಯಮಗಳನ್ನು ಎತ್ತಿಹಿಡಿದ ಹೈಕೋರ್ಟ್

ಟ್ಯಾಕ್ಸಿ ಸೇವೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ರೂಪಿಸಿರುವ ನಿಯಮಗಳನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಟ್ಯಾಕ್ಸಿ ಸೇವೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ರೂಪಿಸಿರುವ ನಿಯಮಗಳನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ವೆಬ್‌ ತಂತ್ರಜ್ಞಾನ, ಅಗ್ರಿಗೇಟರ್ಸ್ ಅಧಿನಿಯಮ-2016 ಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಆರ್.ಎಸ್‌.ಚೌಹಾಣ್‌ ಅವರಿದ್ದ ಏಕಸದಸ್ಯ ಪೀಠ ಗುರುವಾರ ವಿಲೇವಾರಿ ಮಾಡಿದೆ.

ಮೋಟಾರು ವಾಹನಗಳ ಕಾಯ್ದೆ–1988ರ ಕಲಂ 93, 95 (1), 96 (1) ಹಾಗೂ 212ರ ಅನುಸಾರ ರಾಜ್ಯ ಸರ್ಕಾರಕ್ಕೆ ಈ ದಿಸೆಯಲ್ಲಿ ನಿಯಮ ರೂಪಿಸುವ ಎಲ್ಲ ಅಧಿಕಾರ ಇದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಕ್ಯಾಬ್ ಗಳಲ್ಲಿ ಅಳವಡಿಸುವ ಪ್ಯಾನಿಕ್ ಬಟನ್ ಗೆ ಮಾನ್ಯತೆ ನೀಡಲಾಗಿದೆ.

ಅಗ್ರಿಗೇಟರ್‌ ನಿಯಮ 6 (ಎ) ಅನುಸಾರ ಒಬ್ಬ ಅಗ್ರಿಗೇಟರ್‌ ಕನಿಷ್ಠ 100 ವಾಹನಗಳನ್ನು ಹೊಂದಿರಬೇಕೆಂಬ ಸರ್ಕಾರದ ನಿಲುವು ಸಂವಿಧಾನಬದ್ಧವಾಗಿದೆ. ಟ್ಯಾಕ್ಸಿ ಚಾಲಕ ನೋಂದಣಿ ಮಾಡಿಸಿಕೊಳ್ಳುವ ಮುನ್ನ ಏಳು ವರ್ಷಗಳ ಹಿಂದಿನ ಪೂರ್ವಾಪರಗಳನ್ನು ಪೊಲೀಸರ ಮುಖಾಂತರ ಪರಿಶೀಲನೆ ಮಾಡಿರತಕ್ಕದ್ದು. ಆಲ್ ಇಂಡಿಯಾ ಪರವಾನಗಿ ಹೊಂದಿರುವ ವಾಹನಗಳು ಪ್ರವಾಸಿಗರನ್ನು ಮಾತ್ರ ಕರೆದೊಯ್ಯಬೇಕೇ ವಿನಾ ಪ್ರಯಾಣಿಕರನ್ನಲ್ಲ ಎಂದು ಹೇಳಿದೆ. ಚಾಲಕ ಕರ್ನಾಟಕದಲ್ಲಿ ಕನಿಷ್ಠ ಎರಡು ವರ್ಷಗಳಿಂದ ನೆಲೆಸಿರಬೇಕು ಹಾಗೂ ಕನ್ನಡದಲ್ಲಿ ವ್ಯವಹರಿಸುವ ಜ್ಞಾನ ಹೊಂದಿರಬೇಕು ಎಂಬುದು ಸರಿಯಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಉಬರ್‌ ಕಂಪೆನಿ ಪರ ಹಿರಿಯ ವಕೀಲ ಸಜನ್‌ ಪೂವಯ್ಯ, ರೇಡಿಯೊ ಟ್ಯಾಕ್ಸಿ ಸಂಘದ ಪರ ಹಿರಿಯ ವಕೀಲರಾದ ಎಸ್‌.ಎಸ್‌.ನಾಗಾನಂದ, ಪ್ರೊ.ರವಿವರ್ಮ ಕುಮಾರ್, ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಪರ ಎಂ.ಎನ್‌.ಕುಮಾರ್ ಹಾಗೂ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ, ಆಲ್‌ ಇಂಡಿಯಾ ಟ್ಯೂರಿಸ್ಟ್‌ ಪರ್ಮಿಟ್‌ ಹಿಕಲ್ಸ್‌ ಮಾಲೀಕರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com