ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ಮಧ್ಯೆ 4,202 ಕೋಟಿ ರೂ ವೆಚ್ಚದಲ್ಲಿ ಮೆಟ್ರೊ ಕಾರಿಡಾರ್

ರಾಜ್ಯ ಸರ್ಕಾರದ ತಾತ್ವಿಕ ಅನುಮೋದನೆ ನಂತರ ಸಿಲ್ಕ್ ಬೋರ್ಡ್ ಮತ್ತು ಕೆ.ಆರ್.ಪುರಂ ಮಧ್ಯೆ...
ಬೆಂಗಳೂರು ಮೆಟ್ರೊ
ಬೆಂಗಳೂರು ಮೆಟ್ರೊ
ಬೆಂಗಳೂರು: ರಾಜ್ಯ ಸರ್ಕಾರದ ತಾತ್ವಿಕ ಅನುಮೋದನೆ ನಂತರ ಸಿಲ್ಕ್ ಬೋರ್ಡ್ ಮತ್ತು ಕೆ.ಆರ್.ಪುರಂ ಮಧ್ಯೆ ಎತ್ತರಿಸಿದ ಮೆಟ್ರೊ ಕಾರಿಡಾರ್(ಇಲೆವೇಟೆಡ್ ಕಾರಿಡಾರ್) ಗೆ ವಿಸ್ತಾರವಾದ ಯೋಜನಾ ವರದಿಯನ್ನು ಬೆಂಗಳೂರು ಮೆಟ್ರೋ ಪ್ರಕಟಿಸಿದೆ.
ವರದಿ ಪ್ರಕಾರ, 15 ಕಿಲೋ ಮೀಟರ್ ಉದ್ದದ ಎತ್ತರಿಸಿದ ಕಾರಿಡಾರ್ ನ್ನು 4,202 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಮುಂದಿನ ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಮಾರ್ಗ ಮಧ್ಯೆ 13 ನಿಲ್ದಾಣಗಳು ಹಾಗೂ ಕೆ.ಆರ್ ಪುರಂ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಗಳಲ್ಲಿ ಎರಡು ಜಂಕ್ಷನ್ ಗಳಿರುತ್ತವೆ.
ಪ್ರಸ್ತಾವನೆ ಪ್ರಕಾರ, ಸಿಲ್ಕ್ ಬೋರ್ಡ್ ಮತ್ತು ಕೆ.ಆರ್.ಪುರಂ ಎಲೆವೇಟೆಡ್ ಕಾರಿಡಾರ್ ಮೆಟ್ರೋದ ಎರಡನೇ ಹಂತದ ಕಾಮಗಾರಿಯಾಗಿದ್ದು, ಅದನ್ನು ಇಂಟರ್ ಚೇಂಜ್ ಗೆ ಬದಲಾಯಿಸಿ ಸಂಪರ್ಕಿಸಲಾಗುತ್ತದೆ. ಔಟರ್ ರಿಂಗ್ ರೋಡ್ ಇಲೆವೇಟೆಡ್ ಸ್ಟಾಂಡರ್ಡ್ ಗಾಜ್ ಕಾರಿಡಾರ್ ಆಗಿದ್ದು ಎರಡು ಮಾರ್ಗಗಳಿರುತ್ತವೆ ಎಂದು ವರದಿ ತಿಳಿಸಿದೆ.
ಈ ಮಾರ್ಗದಲ್ಲಿ ಮೆಟ್ರೋ ಮಾರ್ಗದ ಅವಶ್ಯಕತೆಯನ್ನು ವರದಿಯಲ್ಲಿ ಸಮರ್ಥಿಸಿಕೊಳ್ಳಲಾಗಿದ್ದು, ಹೊರಾಂಗಣ ರಿಂಗ್ ರಸ್ತೆಗಳನ್ನು ಇಂದು ಮೆಟ್ರೊಪಾಲಿಟನ್ ಸಿಟಿಗಳಲ್ಲಿ ವಾಹನ ಸವಾರರು ಬಳಸಿಕೊಳ್ಳುವ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನ ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಮಧ್ಯೆ ಪ್ರತಿದಿನ ನಾಲ್ಕೂವರೆ ಲಕ್ಷಕ್ಕೂ ಅಧಿಕ ಕಾರುಗಳು ಓಡಾಡುತ್ತಿದ್ದು ಪ್ರತಿಗಂಟೆಗೆ 18,750 ವಾಹನಗಳು ಔಟರ್ ರಿಂಗ್ ರೋಡ್ ನಲ್ಲಿ ಓಡಾಡುತ್ತವೆ. ಬೆಳಗ್ಗೆ ಮತ್ತು ಸಾಯಂಕಾಲ ಪೀಕ್ ಅವರ್ಸ್ ನಲ್ಲಿ 5-10 ಕಿಲೋ ಮೀಟರ್ ಪ್ರಯಾಣಕ್ಕೆ ಉದ್ಯೋಗಕ್ಕೆ ತೆರಳುವವರು 2-3 ಗಂಟೆ ಹೊತ್ತು ಟ್ರಾಫಿಕ್ ನಲ್ಲಿ ಪ್ರಯಾಣಿಸಬೇಕಾಗುತ್ತದೆ. ಇದರಿಂದ ವಾರ್ಷಿಕವಾಗಿ ಸುಮಾರು 20,713 ಕೋಟಿ ರೂಪಾಯಿಗಳು ನಷ್ಟವಾಗುತ್ತದೆ. ಹಾಗಾಗಿ ಮೆಟ್ರೋ ಕಾಮಗಾರಿಯ ಎರಡನೇ ಹಂತದಲ್ಲಿ ಈ ಮಾರ್ಗದಲ್ಲಿ ಕಾಮಗಾರಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com