ರೆಡ್ಡಿ ಮಗಳ ಮದುವೆಗೆ ಬಂದ ಜನ ಸಾಗರ; ಪಾರ್ಕಿಂಗ್ ಸಮಸ್ಯೆ, ಊಟದ ಮನೆ ಅಸ್ತವ್ಯಸ್ತ

ಗಣಿಧನಿ ಗಾಲಿ ಜನಾರ್ದನ ರೆಡ್ಡಿ ಅವರ ಮಗಳು ಬ್ರಹ್ಮಣಿಯ ಮದುವೆ ನಿನ್ನೆ ಬೆಂಗಳೂರಿನ ಅರಮನೆ...
ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆಯಾದ ಬ್ರಹ್ಮಿಣಿ ಮತ್ತು ರಾಜೀವ ರೆಡ್ಡಿ
ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆಯಾದ ಬ್ರಹ್ಮಿಣಿ ಮತ್ತು ರಾಜೀವ ರೆಡ್ಡಿ
ಬೆಂಗಳೂರು: ಗಣಿಧನಿ ಗಾಲಿ ಜನಾರ್ದನ ರೆಡ್ಡಿ ಅವರ ಮಗಳು ಬ್ರಹ್ಮಣಿಯ ಮದುವೆ ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಿದ್ದು ಸುಮಾರು 70 ಸಾವಿರ ಮಂದಿ ಅತಿಥಿಗಳು ಮದುವೆಗೆ ಸಾಕ್ಷಿಯಾದರು. 
ಹೆಚ್ಚಿನ ಮುಖಬೆಲೆಯ ನೋಟುಗಳ ನಿಷೇಧದಿಂದ ಸಾಮಾನ್ಯ ನಾಗರಿಕರು ಪರದಾಡುತ್ತಿರುವುದರ ಮಧ್ಯೆ ಆಡಂಭರದ ಮದುವೆಗೆ ಸಮಾಜದ ಹಲವು ವರ್ಗಗಳಿಂದ ಟೀಕೆ ಕೇಳಿಬರುತ್ತಿರುವುದರುವುದು ಒಂದೆಡೆಯಾದರೆ ನಿನ್ನೆಯ ಮದುವೆಯಲ್ಲಿ ಹಲವು ತೊಂದರೆಗಳು ಎದುರಾದವು. ಅರಮನೆ ಮೈದಾನದ ಒಳಗೆ ಪಾರ್ಕಿಂಗ್ ಸಮಸ್ಯೆ, ಊಟದ ಹಾಲ್ ನಲ್ಲಿ ಸೂಕ್ತ ವ್ಯವಸ್ಥೆ ಕೊರತೆ, ಬಂದ ಜನರು ಅಲ್ಲಲ್ಲಿ ಉಗುಳುತ್ತಿದ್ದುದು, ಸಿಕ್ಕಸಿಕ್ಕಲ್ಲಿ ಪಾಕೆಟ್ ಗಳನ್ನು ಎಸೆಯುತ್ತಿದ್ದುದು, ಬಳ್ಳಾರಿ ರಸ್ತೆಯಲ್ಲಿ ವಿಪರೀತ ಟ್ರಾಫಿಕ್ ಜಾಮ್ ಇತ್ಯಾದಿಗಳು ಕಂಡುಬಂದವು. ಮದುವೆಗೆ ಆಗಮಿಸಿದ್ದ ಸಿನಿಮಾ ನಟರನ್ನು ನೋಡಲು ಮತ್ತಷ್ಟು ಜನ ಮುಗಿಬೀಳುತ್ತಿದ್ದರು.
ವಸಂತನಗರದ ಮಾರ್ಗದಲ್ಲಿ ಮದುವೆ ನಡೆಯುತ್ತಿದ್ದ ಸಮಾರಂಭಕ್ಕೆ ಹೋಗುವ ಪ್ರವೇಶ ದ್ವಾರವನ್ನು ಅದ್ಭುತವಾಗಿ ವಿನ್ಯಾಸಗೊಳಿಸಲಾಗಿತ್ತಾದರೂ ಕೂಡ ಅರಮನೆ ಮೈದಾನದ ಒಳಗೆ ಪಾರ್ಕಿಂಗ್ ಸಮಸ್ಯೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ಬಸ್ಸು, ಕಾರುಗಳ ಜೊತೆಗೆ ಮೈದಾನದ ಒಳಗೆ ದ್ವಿಚಕ್ರ ವಾಹನ, ಆಟೋರಿಕ್ಷಾಗಳಿಗೆ ಪ್ರವೇಶ ನೀಡಿದ್ದು ಗೊಂದಲ, ಅವ್ಯವಸ್ಥೆಗೆ ಮತ್ತಷ್ಟು ಕಾರಣವಾಯಿತು.
ಊಟದ ಮನೆಯಲ್ಲಿನ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಸಾಮಾನ್ಯ ಜನರಿಗಿದ್ದ ಡೈನಿಂಗ್ ಹಾಲ್ ನಲ್ಲಿ ಒಂದು ಸಲಕ್ಕೆ ಮೂರೂವರೆ ಸಾವಿರ ಜನ ಕುಳಿತುಕೊಳ್ಳಬಹುದಾಗಿತ್ತು. ಆದರೆ ಅದನ್ನು ಸರಿಯಾಗಿ ನಿರ್ವಹಿಸಿರಲಿಲ್ಲ. ಬೆಳಗ್ಗೆ 10.30ರಿಂದಲೇ ಅತಿಥಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ನಾವು ಮಧ್ಯಾಹ್ನ 1.30ಕ್ಕೆ ಊಟ ಮಾಡಲು ಬಂದಾಗ ನಮಗೆ ಸಿಕ್ಕಿದ್ದು ಅನ್ನ, ಸಾಂಬಾರು ಮಾತ್ರ ಎನ್ನುತ್ತಾರೆ ಬಾಗೇಪಲ್ಲಿಯ ಉದ್ಯಮಿ ವೆಂಕಟೇಶ್. ಸಿಹಿ ತಿನಿಸುಗಳನ್ನು ಬಿಟ್ಟುಬಿಡಿ ನಮಗೆ ಕುಡಿಯಲು ನೀರು ಕೂಡ ಸಿಗಲಿಲ್ಲ ಎನ್ನುತ್ತಾರೆ ಬಳ್ಳಾರಿಯ ಮತ್ತೊಬ್ಬ ವ್ಯಕ್ತಿ. 
ಈ ಅವ್ಯವಸ್ಥೆಯಿಂದಾಗಿ ಮದುವೆಗೆ ಬಂದ ಅತಿಥಿಗಳು ಮತ್ತು ಆಹಾರ ಪೂರೈಸುವವರ ಮಧ್ಯೆ ವಾಗ್ವಾದ ನಡೆಯಿತು. ಸ್ವೀಟುಗಳು ಎಲ್ಲ ಮುಗಿದಿರುವಾಗ ನಾವು ಅತಿಥಿಗಳಿಗೆ ನೀಡಲು ಹೇಗೆ ಸಾಧ್ಯ ಎಂದು ಊಟ ಬಡಿಸುವವರೊಬ್ಬರು ಕೇಳಿದರು.
ಅದಲ್ಲದೆ ಅರಮನೆ ಮೈದಾನದ ಒಳಗೆ ಕಾರ್ಯಕ್ರಮ ನಡೆಯುತ್ತಿದ್ದ ಜಾಗದಲ್ಲಿ ಬಂದವರು ಉಗುಳುವುದು ಸಾಮಾನ್ಯವಾಗಿತ್ತು.ಬಾಳೆ ಎಲೆಗಳು, ಅಡಿಕೆ ಎಲೆ, ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಜನರು ತಿಂದುಳಿದ ಆಹಾರಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದರು.
ಕೈ ತೊಳೆಯಲು ನೀರಿನ ಟಾಪ್ ಗಳ ಸಂಖ್ಯೆ ಸಾಕಾಗದಿದ್ದಾಗ ಜನರು ಬಾಳೆ ಎಲೆ ಎಸೆಯುವ ಟಬ್ ನಲ್ಲಿ ಕೈ ತೊಳೆದರು. ಹೌಸ್ ಕೀಪಿಂಗ್ ಸಿಬ್ಬಂದಿಗೆ ಇವೆಲ್ಲವುಗಳನ್ನು ನಿಯಂತ್ರಿಸುವುದು ಕಷ್ಟವಾಯಿತು. 
ಪ್ರತಿಸಲ ಸೆಲೆಬ್ರೆಟಿಯೊಬ್ಬರು ಮದುವೆ ಸಮಾರಂಭಕ್ಕೆ ಪ್ರವೇಶಿಸುವಾಗ ಜನರು ಸೆಲ್ಫಿ ತೆಗೆದುಕೊಳ್ಳಲು ಅವರನ್ನು ಮುತ್ತಿಕ್ಕುತ್ತಿದ್ದರು. ಅಲ್ಲಿ ಜನರ ಗುಂಪನ್ನು ನಿಯಂತ್ರಿಸುವುದು ಕಷ್ಟವಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com