ಕುಮಟಾ: ಕುದಿಯುವ ಎಣ್ಣೆಯಿಂದ ವಡೆ ತೆಗೆದು ದೇವಿಗೆ ಅರ್ಪಿಸುವ ಭಕ್ತರು

ಭೂಮಿ ಹುಣ್ಣಿಮೆಯ ದಿನ ಕುಮಟಾದ ರಾಯೇಶ್ವರ ಕಾವೂರು ಕಾಮಾಕ್ಷಿ ಹಾಗೂ ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ವಿಶಿಷ್ಟವಾಗಿ ವಡೆ ಸೇವೆ ನೆರವೇರುತ್ತದೆ...
ವಡೆ ಸೇವೆ ಮಾಡುತ್ತಿರುವ ಭಕ್ತರು
ವಡೆ ಸೇವೆ ಮಾಡುತ್ತಿರುವ ಭಕ್ತರು

ಕುಮ್ಟಾ: ಭೂಮಿ ಹುಣ್ಣಿಮೆಯ ದಿನ ಕುಮಟಾದ ರಾಯೇಶ್ವರ ಕಾವೂರು ಕಾಮಾಕ್ಷಿ ಹಾಗೂ ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ವಿಶಿಷ್ಟವಾಗಿ ವಡೆ ಸೇವೆ ನೆರವೇರುತ್ತದೆ.

ಪ್ರತಿ ವರ್ಷ ಭೂಮಿ ಹುಣ್ಣಿಮೆಯ ದಿನ ದೇವಸ್ಥಾನದ ಮುಂಭಾಗದಲ್ಲಿ ಒಲೆಯನ್ನು ಇಟ್ಟು ಬಾಣಲಿಯಲ್ಲಿ ಎಣ್ಣೆಯನ್ನು ಹಾಕುತ್ತಾರೆ. ನಂತರ ದೇವಿಗೆ ಮಂಗಳಾರತಿ ಮಾಡುವ ಮೂಲಕ ಸಂಕಲ್ಪ ಮಾಡಿ ಮುಖ್ಯ ಅರ್ಚಕರು ಕಾದ ಬಾಣಲಿಯಲ್ಲಿ ಕುದಿಯುತ್ತಿರುವ ಎಣ್ಣೆಗೆ ಹೂವನ್ನು ಹಾಕಿ ನಂತರ ಹಿಟ್ಟು ಮತ್ತು ಮೆಂತೆಯ ಮಿಶ್ರಣದಿಂದ ಮಾಡಿದ ಹಸಿ ವಡೆಯನ್ನು ಕಾದ ಎಣ್ಣೆಯಲ್ಲಿ ಕರಿಯುತ್ತಾರೆ.

ಕುದಿಯುತ್ತಿರುವ ಎಣ್ಣೆಯಲ್ಲಿ ಒಂದೆಡೆ ವಡೆ ಕರಿಯುತ್ತಿದ್ದರೆ ಮತ್ತೊಂದೆಡೆ ಬರಿಗೈನಲ್ಲಿ ಎಣ್ಣೆಗೆ ಕೈಯನ್ನು ಹಾಕಿ ವಡೆಯನ್ನ ತೆಗೆಯುತ್ತಾರೆ. ಇದಾದ ನಂತರ ಸಾಲು ಸಾಲಾಗಿ ಬರುವ ಭಕ್ತರು ದೇವಸ್ಥಾನದ ಅರ್ಚಕರಿಂದ ಹೂವಿನ ಪ್ರಸಾದವನ್ನ ಪಡೆದು ಕಾದಿರುವ ಎಣ್ಣೆಯಲ್ಲಿ ಕೈಯನ್ನ ಹಾಕಿ ವಡೆಯನ್ನ ತೆಗೆಯುತ್ತಾರೆ. ಭೂಮಿ ಹುಣ್ಣಿಮೆಯ ದಿನ ತಮ್ಮ ಒಳಿತಿಗಾಗಿ ಹರಕೆ ಕಟ್ಟಿಕೊಳ್ಳುವ ಭಕ್ತರು ಕಾದ ಬಾಣಲಿಯಲ್ಲಿ ವಡೆ ತೆಗೆಯುವ ಮೂಲಕ ಹರಕೆ ತೀರಿಸುತ್ತಾರೆ.

ಬಾಣಲೆಯಿಂದ ತೆಗೆದ ವಡೆಯನ್ನು ಪ್ರಸಾದವಾಗಿ ಭಕ್ತರಿಗೆ ನೀಡಲಾಗುತ್ತೆ. ಈ ಮೂಲಕ ಸುಮಾರು ನಾನೂರು ವರ್ಷಗಳ ಇತಿಹಾಸವಿರುವ ಈ ಆಚರಣೆ ಕುಮಟಾ ಮೂಲಕ ಜಿಲ್ಲೆಯ ಹಲವು ಭಾಗಕ್ಕೆ ಹರಡಿದ್ದು ಪ್ರಸಿದ್ಧಿ ಪಡೆದಿದೆ.

ನಮಗೆ ದೇವಿ ಬಳಿ ಒಂದು ಕೆಲಸ ನಡೆಸಿಕೊಡುವಂತೆ ಬೇಡಿಕೊಂಡಿದ್ದೆ. ಆ ಕೆಲಸ ನೆರವೇರಿತು. ಹೀಗಾಗಿ ಬಾಣಲೆಯಿಂದ ವಡೆ ತೆಗೆದಿದ್ದೇನೆ. ವಡೆ ತೆಗೆಯುವ ವೇಳೆ ನನ್ನ ಕೈಗೆ ಯಾವುದೇ ಗಾಯಗಳಾಗಿಲ್ಲ. ಉರಿಯೂ ಇಲ್ಲ, ಈ ಸೇವೆ ಮಾಡಿದ ನಂತರ ನನ್ನ ಮನಸ್ಸು ತುಂಬಾ ಸಂತೋಷವಾಗಿದೆ ಎಂದು ಭಕ್ತರೊಬ್ಬರು ಹೇಳಿದ್ದಾರೆ.

ಕುದಿಯತ್ತಿರುವ ಎಣ್ಣೆಯಲ್ಲಿ ಕೈ ಹಾಕಿ ವಡೆ ತೆಗೆಯುವುದು ಪವಾಡವಲ್ಲ, ಇದರಲ್ಲಿ ಯಾವುದೇ ಮ್ಯಾಜಿಕ್ ಇಲ್ಲ, ಎಣ್ಣೆಗೆ ನಾವು ಯಾವುದೇ ರಾಸಾಯನಿಕವನ್ನು ಮಿಶ್ರಣ ಮಾಡಿಲ್ಲ ಇದು ಕಾಮಾಕ್ಷಿ ದೇವಿಯ ಮಹಿಮೆ ಎಂದು ದೇವಸ್ಥಾನದ ಮುಖ್ಯ ಅರ್ಚಕ ಮುತ್ತಪ್ಪ ರೈ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com