ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ವಾಹನಗಳು ಹಾರ್ನ್ ಮಾಡುವಂತಿಲ್ಲ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ನ್ನು ನವೆಂಬರ್ 1ರಿಂದ ಹಾರ್ನ್ ರಹಿತ ವಲಯವನ್ನಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ನ್ನು ನವೆಂಬರ್ 1ರಿಂದ ಹಾರ್ನ್ ರಹಿತ ವಲಯವನ್ನಾಗಿ ಘೋಷಿಸಲಿದೆ. ವಾಹನಗಳ ಹಾರ್ನ್ ನಿಂದ ಸ್ನಾತಕೋತ್ತರ ವಿಷಯಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕುಳಿತು ಪಾಠ ಕೇಳಲು ತೊಂದರೆಯಾಗುತ್ತದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಕ್ಯಾಂಪಸ್ ಒಳಗೆ ಹಾರ್ನ್ ಮಾಡದಂತೆ ನಿಯಮ ಜಾರಿಗೆ ತರಲು ನಿರ್ಧರಿಸಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ವಿಭಾಗದ ರಿಜಿಸ್ಟ್ರಾರ್ ಪ್ರೊ.ಕೆ.ಎನ್.ನಿಂಗೇ ಗೌಡ, ಕ್ಯಾಂಪಸ್ ಒಳಗಡೆ ವಾಹನದ ಓಡಾಟದಿಂದ ತುಂಬಾ ತೊಂದರೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಂದ ಮತ್ತು ಸಿಬ್ಬಂದಿ ವರ್ಗದವರಿಂದ ಸಾಕಷ್ಟು ದೂರುಗಳು ಬಂದಿವೆ. ಕ್ಯಾಂಪಸ್ ಒಳಗಿರುವ ರಸ್ತೆ ನಗರದ ಪ್ರಮುಖ ಮೂರು ರಸ್ತೆಗಳಿಗೆ ಸಂಪರ್ಕ ಹೊಂದುವುದರಿಂದ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಹಾಗಾಗಿ ಕ್ಯಾಂಪಸ್ ಒಳಗಡೆ ವಾಹನಗಳು ಹಾರ್ನ್ ಮಾಡದಂತೆ ನಿಷೇಧ ಹೇರಲು ನಾವು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಈ ನಿಯಮ ಮುಂದಿನ ನವೆಂಬರ್ 1ರಿಂದ ಜಾರಿಗೆ ಬರಲಿದ್ದು ಕ್ಯಾಂಪಸ್ ರಸ್ತೆಯಲ್ಲಿ ವಾಹನದಲ್ಲಿ ಯಾರೆಲ್ಲಾ ಓಡಾಡುತ್ತಾರೆಯೋ ಅವರೆಲ್ಲಾ ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗುತ್ತದೆ. ಹಾರ್ನ್ ರಹಿತ ವಲಯದ ಬಗ್ಗೆ ಸಾರ್ವಜನಿಕರಲ್ಲಿ, ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕ್ಯಾಂಪಸ್ ನಲ್ಲಿ ಮೂರು ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ ಎಂದು ನಿಂಗೇ ಗೌಡ ತಿಳಿಸಿದ್ದಾರೆ.
ಹಾರ್ನ್ ರಹಿತ ವಲಯ ಎಂದು ಜ್ಞಾನಭಾರತಿ ಕ್ಯಾಂಪಸ್ ನ್ನು ಘೋಷಿಸಿದ್ದಕ್ಕೆ ವಿದ್ಯಾರ್ಥಿಗಳಿಗೂ ಖುಷಿಯಿದೆ. ಇಲ್ಲಿ ತುಂಬಾ ವಾಹನಗಳು ಓಡಾಡುತ್ತಿರುವುದರಿಂದ ತರಗತಿಯಲ್ಲಿ ಕುಳಿತು ಪಾಠ ಕೇಳಲು, ಲೈಬ್ರೆರಿಯಲ್ಲಿ ಕುಳಿತು ಓದಲು, ಹಾಸ್ಟೆಲ್ ಗಳಲ್ಲಿ ಇರಲು ತೊಂದರೆಯಾಗುತ್ತದೆ. ಈ ಬಗ್ಗೆ ವಿಶ್ವವಿದ್ಯಾಲಯದ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದೇವೆ.ಕೊನೆಗೂ ವಿಶ್ವವಿದ್ಯಾಲಯ ತೀರ್ಮಾನ ತೆಗೆದುಕೊಂಡಿರುವುದು ಸಂತಸ ತಂದಿದೆ ಎನ್ನುತ್ತಾರೆ ಸ್ನಾತಕೋತ್ತರ ವಿದ್ಯಾರ್ಥಿ ನಾಗೇಶ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com