ಮಾತೃಭಾಷೆಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಕಡ್ಡಾಯಗೊಳಿಸಬೇಕು: ಸಿದ್ದರಾಮಯ್ಯ

ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಸ್ಥಳೀಯ ಭಾಷೆಯನ್ನು ಕಲಿಕೆಯ ಮಾಧ್ಯಮವಾಗಿ ಕಡ್ಡಾಯಗೊಳಿಸುವ ಅಗತ್ಯತೆಯನ್ನು...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಬೆಂಗಳೂರು: ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಸ್ಥಳೀಯ ಭಾಷೆಯನ್ನು ಕಲಿಕೆಯ ಮಾಧ್ಯಮವಾಗಿ ಕಡ್ಡಾಯಗೊಳಿಸುವ ಅಗತ್ಯತೆಯನ್ನು ಸಾರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. 
ಕರ್ನಾಟಕ ರಾಜ್ಯೋತ್ಸವ(ರಾಜ್ಯ ರಚನೆಗೊಂಡ ದಿನ)ದ ಸಂದರ್ಭದಲ್ಲಿ ಅವರು ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿ, ಪ್ರಾಥಮಿಕ ಶಿಕ್ಷಣ ಬೋಧನೆಯಲ್ಲಿ ಕನ್ನಡವನ್ನು ಕಡ್ಡಾಯ ಮಾಧ್ಯಮವಾಗಿ ಮಾಡಲು ಶಾಸನ ಜಾರಿಗೊಳಿಸಬೇಕೆಂಬ ಸರ್ಕಾರದ ಪ್ರಯತ್ನವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಭಾಷೆಗಳನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ತರುವ ತೀರ್ಮಾನವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿರುವುದು ಕೇವಲ ಕನ್ನಡಕ್ಕೆ ಮಾತ್ರವಲ್ಲ ದೇಶದ ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಮಾತೃ ಭಾಷೆಗಳ ಉಳಿವಿಗೆ ಧಕ್ಕೆಯನ್ನುಂಟುಮಾಡುತ್ತದೆ ಎಂದು ಹೇಳಿದರು.
ಭಾರತದಲ್ಲಿ ಸಂಯುಕ್ತ ವ್ಯವಸ್ಥೆಯಿದ್ದು ಇಲ್ಲಿ ಭಾಷೆಗಳ ಆಧಾರದ ಮೇಲೆ ರಾಜ್ಯಗಳ ರಚನೆಯಾಗಿವೆ. ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ಬೇಕು. ಸ್ಥಳೀಯ ಭಾಷೆಗಳ ಉಳಿವಿಗೆ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಒದಗಿಸುವಂತೆ ಮಹಾತ್ಮಾ ಗಾಂಧಿ, ವಿವೇಕಾನಂದ ಮತ್ತು ರಾಮ್ ಮನೋಹರ್ ಲೋಹಿಯಾರಂಥವರೂ ಶಿಫಾರಸು ಮಾಡಿದ್ದರು ಎಂದು ಮುಖ್ಯಮಂತ್ರಿ ಸ್ಮರಿಸಿದರು.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಲು ಇತರ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲು ಬದ್ಧವಾಗಿರುವುದಾಗಿ ಹೇಳಿದರು. ಇಂಗ್ಲಿಷ್ ಭಾಷೆಯನ್ನು ಜನರು ಕುರುಡಾಗಿ ಪ್ರೀತಿಸುವುದು ಕನ್ನಡದ ಉಳಿವಿಗಿ ಧಕ್ಕೆಯನ್ನುಂಟುಮಾಡಿದೆ. ಇಂಗ್ಲಿಷ್ ಭಾಷೆಯಲ್ಲಿ ಪರಿಣಿತರಾಗದಿದ್ದರೆ ತಮ್ಮ ಮಕ್ಕಳಿಗೆ ಭವಿಷ್ಯವಿಲ್ಲ ಎಂದು ಇಂದಿನ ಕನ್ನಡಿಗ ಪೋಷಕರು ಏಕೆ ಭಾವಿಸುತ್ತಾರೆ, ಅದಕ್ಕೆ ಕಾರಣವೇನು ಎಂದು ನಾವು ಪರಾಮರ್ಶೆ ನಡೆಸಬೇಕಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com