ನಮ್ಮ ಜನರಿಗೆ ಕುಡಿಯಲು ನೀರಿಲ್ಲ, ಇನ್ನು ತಮಿಳು ನಾಡಿಗೆ ಕೃಷಿಗೆ ನೀರು ಕೊಡುವುದು ಯಾವ ನ್ಯಾಯ?:ಹೆಚ್ ಡಿ ದೇವೇಗೌಡ

ನಮ್ಮ ನಾಡಿನ ಜನರು ಮತ್ತು ರೈತರಿಗೆ ಕುಡಿಯಲು ನೀರಿಲ್ಲ, ಹೀಗಿರುವಾಗ ತಮಿಳು ನಾಡಿಗೆ ಬೆಳೆ ಬೆಳೆಯಲು ನೀರು ಕೊಡಲು...
ನಿನ್ನೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ  ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ
ನಿನ್ನೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ
Updated on: 
ಮಂಡ್ಯ: ನಮ್ಮ ನಾಡಿನ ಜನರು ಮತ್ತು ರೈತರಿಗೆ ಕುಡಿಯಲು ನೀರಿಲ್ಲ, ಹೀಗಿರುವಾಗ ತಮಿಳು ನಾಡಿಗೆ ಬೆಳೆ ಬೆಳೆಯಲು ನೀರು ಕೊಡಲು ಹೇಗೆ ಸಾಧ್ಯ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಪ್ರಶ್ನಿಸಿದ್ದಾರೆ.
ಇಂದು ಬೆಳಗ್ಗೆ ಹೆಲಿಕಾಪ್ಟರ್ ನಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಜಲಾಶಯದ ಅಣೆಕಟ್ಟಿನ ಸುತ್ತಮುತ್ತ ವೈಮಾನಿಕ ಸಮೀಕ್ಷೆ ಆರಂಭಿಸಿದ ಅವರು ಜಲಾಶಯದಲ್ಲಿನ ನೀರಿನ ವಾಸ್ತವ ಸ್ಥಿತಿ ಅರಿಯುವ ಪ್ರಯತ್ನ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಡ್ಯಾಂಗಳ ವಾಸ್ತವ ಸ್ಥಿತಿ ಅಧ್ಯಯನ ಮಾಡಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ. ಮಂಡ್ಯ, ಕೆಆರ್ ಎಸ್, ಮೈಸೂರು, ಹಾಸನ, ಬೆಂಗಳೂರು ಮೊದಲಾದ ಪ್ರದೇಶಗಳ ಜೀವನಾಡಿ ಕಾವೇರಿ ನದಿ ನೀರು. ಇಲ್ಲಿನ ಭಾಗಗಳ ರೈತರಿಗೆ ಮತ್ತು ಜನರಿಗೆ ಕುಡಿಯಲು ನೀರಿಲ್ಲದಿರುವಾಗ ತಮಿಳು ನಾಡಿನ ಸಾಂಬಾ ಬೆಳೆಗೆ ನೀರು ಬಿಡಲು ಹೇಗೆ ಸಾಧ್ಯ ಮತ್ತು ಅದು ಎಷ್ಟು ಸರಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾವೇರಿ ಜಲಾನಯನ ಪ್ರದೇಶಗಳ ವಸ್ತುಸ್ಥಿತಿಯನ್ನು ಸುಪ್ರೀಂ ಕೋರ್ಟ್ ವರೆಗೂ ಕೊಂಡೊಯ್ಯಲು ಪ್ರಯತ್ನ ಮಾಡುವುದಾಗಿ ಹೇಳಿದರು.
ಪ್ರಧಾನಿ ಭೇಟಿ: ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸಿದ್ದಾರೆ.
ಅವರು ನಿನ್ನೆ ದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿ, ಕಾವೇರಿ ನೀರು ವಿವಾದದಿಂದ ರಾಜ್ಯದಲ್ಲುಂಟಾಗಿರುವ ಪರಿಸ್ಥಿತಿಯನ್ನು ವಿವರಿಸಿದರು. ಈ ನಿಟ್ಟಿನಲ್ಲಿ ಕರ್ನಾಟಕಕ್ಕೆ ಸಹಾಯ ಮಾಡುವಂತೆ ಅವರು ಕೋರಿದ್ದಾರೆ.
ಪ್ರಧಾನಿ ಭೇಟಿ, ಮಾತುಕತೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ದೇವೇಗೌಡ, ಪ್ರಧಾನಿಯವರು ಎರಡೂ ರಾಜ್ಯಗಳ ನಡುವಿನ ಸಮಸ್ಯೆ ಬಗ್ಗೆ ತಿಳಿದಿದ್ದಾರೆ. ಜಾಗೃತ ದಳದ ಮೂಲಕವೂ ಮಾಹಿತಿ ಪಡೆದುಕೊಂಡಿದ್ದಾರೆ. ಕಾವೇರಿ ವಿವಾದವನ್ನು ಬಗೆಹರಿಸಲು ಎಲ್ಲಾ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಪ್ರಧಾನಿಯವರನ್ನು ಒತ್ತಾಯಿಸಿರುವುದಾಗಿ ಹೇಳಿದ್ದಾರೆ. 
ನಂತರ ಕಾವೇರಿ ವಿವಾದದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರನ್ನು ಭೇಟಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಈಗಲೂ ನಾರಿಮನ್ ಅವರ ಮೇಲೆ ಭರವಸೆಯಿದೆ. ರಾಜ್ಯದ ಪರವಾಗಿ ವಾದ ಮಂಡಿಸಿ ಗೆಲ್ಲುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
''ಬೇರೆಯವರು ಹೇಳುವುದನ್ನು ಕೇಳಬೇಡಿ, ನಾರಿಮನ್ ಅವರು ನಮ್ಮ ರಾಜ್ಯದ ಪರವಾಗಿ ಹೋರಾಡುತ್ತಿದ್ದಾರೆ. ಅವರಿಗೆ ಇದರ ಇತಿಹಾಸ ಚೆನ್ನಾಗಿ ತಿಳಿದಿದೆ. ನಾನು ಕೂಡ ಕಳೆದ 50 ವರ್ಷಗಳಿಂದ ಕಾವೇರಿ ನೀರಿನ ವಿಚಾರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com