ಮೃತಪಟ್ಟ ಉಮೇಶ್ ಗೌಡ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಸಚಿವ ಪರಮೇಶ್ವರ್

ಗುಂಡೇಟಿಗೆ ಬಲಿಯಾದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಸಿಂಗೋನಹಳ್ಳಿಯ ಉಮೇಶ್ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ...
ಮೃತ ಉಮೇಶ್
ಮೃತ ಉಮೇಶ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಕಾವೇರಿ ಗಲಾಟೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಸಿಂಗೋನಹಳ್ಳಿಯ ಉಮೇಶ್ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ ನೀಡುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. .

ಉಮೇಶ್ ಗೌಡ ಅವರದ್ದು ತೀರಾ ಬಡತನದ ಕುಟುಂಬ. ವಾಸಿಸಲು ಯೋಗ್ಯವಾದ ಮನೆಯೂ ಇಲ್ಲ. ಇದರ ಜೊತೆಗೆ ಉಮೇಶ್ ತಾಯಿ ತಂದೆ ಅನಾರೋಗ್ಯ ಪೀಡಿತರಾಗಿದ್ದಾರೆ. 4 ವರ್ಷಗಳ ಹಿಂದೆ ವಿವಾಹವಾಗಿದ್ದ ಉಮೇಶ್ ಗೆ ಓರ್ವ ಮಗಳಿದ್ದು, ಪತ್ನಿ 7 ತಿಂಗಳ ಗರ್ಭಿಣಿಯಾಗಿದ್ದಾರೆ. ಮೃತ ಉಮೇಶ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿರುವ ಜಿಲ್ಲಾಧಿಕಾರಿ ವಿ.ಶಂಕರ್ ಮೃತರ ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚವನ್ನು ಸರ್ಕಾರವೇ ಭರಿಸಲಿದೆ , ಹೆಚ್ಚಿನ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಮೃತ ಉಮೇಶ್ ಪತ್ನಿ ಅವರಿಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ.

ಇನ್ನೂ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಕೂಡ ವಯಕ್ತಿಕವಾಗಿ5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ಸೋಮವಾರ ರಾತ್ರಿ ಉಮೇಶ್ ಎಂದಿನಂತೆ ಜೆಪಿ ನಗರದಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮುಗಿಸಿಕೊಂಡು ಮನೆ ಸೇರುವ ತವಕದಲ್ಲಿದ್ದರು. ಆದ್ರೆ ಹೆಗ್ಗನಹಳ್ಳಿಯಲ್ಲಿ ಮೋಹನ್ ಥಿಯೇಟರ್ ಬಳಿ ಪ್ರತಿಭಟನಾಕಾರರು ಪೊಲೀಸ್ ಹೊಯ್ಸಳ ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಗೋಲಿಬಾರ್ ನಡೆಸಿದರು. ಪೊಲೀಸರ ಫೈರಿಂಗ್ ವೇಳೆ ಮೂವರಿಗೆ ಗುಂಡು ತಗುಲಿತು. ಅದೇ ದಾರಿಯಲ್ಲಿ ತೆರಳುತ್ತಿದ್ದ ಉಮೇಶ್ ಅವರಿಗೂ ಕೂಡ ಗುಂಡೇಟು ಬಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com