
ಬೆಂಗಳೂರು: ಕಾವೇರಿ ಹೊರಾಟದಲ್ಲಿ ಇಡೀ ಬೆಂಗಳೂರೇ ಹೊತ್ತಿ ಉರಿಯುತ್ತಿದ್ದ ಸಂದರ್ಭ, ತಮಿಳುನಾಡಿನ ವಾಹನಗಳಿಗೆ ಎಲ್ಲೆಂದರಲ್ಲಿ ಬೆಂಕಿ ಹಚ್ಚುತ್ತಿದ್ದ ವೇಳೆ ಕನ್ನಡಿಗ ಲಾರಿ ಮಾಲೀಕರೊಬ್ಬರು ಕೆಪಿಎನ್ ಟ್ರಾವೆಲ್ಸ್ ನ ಚಾಲಕರನ್ನು ಸುರಕ್ಷಿತವಾಗಿ ತಮಿಳುನಾಡು ಸೇರಿಸಿದ್ದಾರೆ.
ನಗರದಲ್ಲಿ ಟ್ರಾನ್ಸ್ ಪೋರ್ಟ್ ವ್ಯವಹಾರ ಮಾಡುತ್ತಿರುವ ಬಿ. ಶಿವಣ್ಣ ಎಂಬುವರು ಕೆಪಿಎನ್ ಟ್ರಾವೆಲ್ಸ್ ನ 31 ಚಾಲಕರನ್ನು ತಮ್ಮ ಕಂಟೈನರ್ ವಾಹನದಲ್ಲಿ ಕರೆದು ಕೊಂಡು ಹೋಗಿ ಸುರಕ್ಷಿತವಾಗಿ ಕರ್ನಾಟಕದ ಗಡಿ ದಾಟಿಸಿದ್ದಾರೆ.
ಕೆಪಿಎನ್ ಟ್ರಾವೆಲ್ಸ್ ಗೆ ಸೇರಿದ ಹಲವು ಬಸ್ ಗಳಿಗೆ ಬೆಂಕಿ ಹಚ್ಚಿದ ನಂತರ ಹೆದರಿದ ಚಾಲಕರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದಿದ್ದರು. ವಾಪಸ್ ತಮ್ಮೂರಿಗೆ ತೆರಳಲು ಬೆದರಿ ಕುಳಿತಿದ್ದರು. ಚಾಮರಾಜಪೇಟೆಯಲ್ಲಿನ ಶಿವ ಟ್ರಾನ್ಸ್ ಪೋರ್ಟ್ ನ ಮಾಲೀಕ ಬಿ. ಶಿವಣ್ಣ ಅವರು ಎಲ್ಲಾ 31 ಚಾಲಕರನ್ನು ತಮ್ಮ ಕಂಟೈನರ್ ಲಾರಿಯಲ್ಲಿ ಕೂರಿಸಿ ಅವರನ್ನು ಸುರಕ್ಷಿತವಾಗಿ ಕರ್ನಾಟಕ ಗಡಿಭಾಗಕ್ಕೆ ಬಿಟ್ಟು ಬಂದಿದ್ದಾರೆ ಎಂದು ಬೆಂಗಳೂರು ತಮಿಳು ಸಂಘದ ಅಧ್ಯಕ್ಷ ದಾಮೋದರ್ ಹೇಳಿದ್ದಾರೆ.ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಪೊಲೀಸರು ಮಾಡಲು ಸಾಧ್ಯವಾಗದ ಕೆಲಸವನ್ನು ಶಿವಣ್ಣ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ರಾತ್ರಿ 9.30ಕ್ಕೆ ಡಿಸೋಜಾ ನಗರಕ್ಕೆ ತೆರಳಿದ ಶಿವಣ್ಣ ಅಲ್ಲಿಂದ ನಾಲ್ವರು ಚಾಲಕರನ್ನು ಲಾರಿಗೆ ಹತ್ತಿಸಿಕೊಂಡು ಬಂದರು, ಮಧ್ಯರಾತ್ರಿ 1.30 ರ ವೇಳೆಗೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿದ್ದ ಉಳಿದ ಚಾಲಕರನ್ನು ಹತ್ತಿಸಿಕೊಂಡು ಎರಡು ರಾಜ್ಯಗಳ ಗಡಿಭಾಗವಾದ ಅತ್ತಿಬೆಲೆ ಬಳಿ ಬಿಟ್ಟು ಬಂದಿದ್ದಾರೆ. ನಮಗಾಗಿ ರಿಸ್ಕ್ ತೆಗೆದುಕೊಂಡ ಶಿವಣ್ಣ ಅವರು ಇದಕ್ಕಾಗಿ ಒಂದು ರೂಪಾಯಿ ಕೂಡ ನಮ್ಮಿಂದ ಕೇಳಲಿಲ್ಲ ಎಂದು ಕೆಪಿಎನ್ ಟ್ರಾವೆಲ್ಸ್ ನ ಮ್ಯಾನೇಜರ್ ಅನ್ಸಾರ್ ತಿಳಿಸಿದ್ದಾರೆ.
Advertisement