ಕಾವೇರಿಗಾಗಿ ರೈಲು ಬಂದ್; ವಾಟಾಳ್ ನಾಗರಾಜ್ ಸೇರಿ ಹಲವರು ಪೊಲೀಸ್ ವಶಕ್ಕೆ

ತಮಿಳು ನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿರುವ 'ರೈಲು ತಡೆ' ಪ್ರತಿಭಟನೆ ವೇಳೆ ಯಾವುದೇ...
ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ಬಿಗಿ ಭದ್ರತೆ
ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ಬಿಗಿ ಭದ್ರತೆ
ಬೆಂಗಳೂರು: ತಮಿಳು ನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿರುವ 'ರೈಲು ತಡೆ' ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ ಎದುರು ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಮೊದಲಾದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಕನ್ನಡಪರ ಕಾರ್ಯಕರ್ತರು ಸುಮಾರು 50 ಮಂದಿಯೊಂದಿಗೆ ಕಾರಿನಲ್ಲಿ ಮೈಸೂರು ಬ್ಯಾಂಕ್ ವೃತ್ತಕ್ಕೆ ಆಗಮಿಸಿದರು. ತಮ್ಮ ಕಾರಿನಿಂದಿಳಿಯದೇ ವಾಟಾಳ್ ನಾಗರಾಜ್ ಕಾರಿನೊಳಗೆ ಕುಳಿತುಕೊಂಡೇ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯನ್ನು ಹತ್ತಿಕ್ಕಲು ನೋಡುತ್ತಿರುವ ಪೊಲೀಸರ ಕ್ರಮವನ್ನು ಖಂಡಿಸಿ ನಾಳೆ ಕಪ್ಪು ದಿನ ಆಚರಿಸಲು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಭದ್ರಕೋಟೆಯಾಗಿ ಮಾರ್ಪಟ್ಟ ರೇಲ್ವೇ ನಿಲ್ದಾಣ
ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಲ್ಲಿ 750ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಅಕ್ಷರಶಃ ಕೋಟೆಯಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು. ಇಂದು ಸಂಜೆ 6 ಗಂಟೆಯವರೆಗೆ ರಾಜ್ಯದಾದ್ಯಂತ ರೈಲು ತಡೆ ಪ್ರತಿಭಟನೆ ನಡೆಯಲಿದೆ. ಈಗಾಗಲೇ ಬೆಂಗಳೂರು ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಸರ್ವ ರೀತಿಯಿಂದಲೂ ಸಜ್ಜಾಗಿದ್ದಾರೆ.

ಹೀಗಾಗಿ ಬೆಂಗಳೂರು ರೈಲ್ವೆ ವಿಭಾಗದಿಂದ ಹೊರಡುವ ರೈಲುಗಳು ಯಾವುದೇ ಅಡ್ಡಿ, ಅಡಚಣೆಯಿಲ್ಲದೆ ನಿಗದಿತ ಸಮಯಕ್ಕೆ ಹೊರಡುತ್ತಿವೆ. ರೈಲು ನಿಲ್ದಾಣಗಳ ತಿಂಡಿ-ತಿನಿಸುಗಳು ಮತ್ತು ಪ್ರವಾಸಿಗರಿಗೆ ಮಾಹಿತಿ ನೀಡುವ ಅಧಿಕಾರಿಗಳು ವಿಧ್ವಂಸಕ ಕೃತ್ಯ ನಡೆಯುವ ಭೀತಿಯಿಂದ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.
ನಾಳೆ ಕರಾಳ ದಿನ ಆಚರಣೆ: ಪ್ರತಿಭಟನಾಕಾರರ ಪ್ರತಿಭಟನೆಯನ್ನು ಹತ್ತಿಕ್ಕುವ ಪೊಲೀಸರ ಕ್ರಮ ಖಂಡಿಸಿ ನಾಳೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಕನ್ನಡ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಲಿದ್ದಾರೆ. ಇಂದು ಪ್ರತಿಭಟನೆ ನಡೆಸದಿದ್ದರೂ ಕೂಡ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು'' ಎಂದು ವಾಟಾಳ್ ನಾಗರಾಜ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com