
ನವದೆಹಲಿ: ಕರ್ನಾಟಕ ಇರುವ ಪರಿಸ್ಥಿತಿಯಲ್ಲಿ ಸದ್ಯಕ್ಕೆ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂಬ ವಿಧಾನಮಂಡಲ ಅಧಿವೇಶನದ ನಿರ್ಣಯದೊಂದಿಗೆ, ರಾಜ್ಯ ಸರ್ಕಾರ ಸಲ್ಲಿಸಿರುವ ಆದೇಶ ಮಾರ್ಪಾಡು ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಇಂದು (ಸೆ.27 ರಂದು) ನಡೆಯಲಿದೆ.
ರಾಜ್ಯ ಸರ್ಕಾರದ ಕಾರಣಗಳನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸುವ ಸಾಧ್ಯತೆಗಳ ಬಗ್ಗೆ ನಿರೀಕ್ಷೆಗಳಿದ್ದು, ಸುಪ್ರೀಂ ವಿಚಾರಣೆ ಹಿನ್ನೆಲೆಯಲ್ಲಿ ಕಾವೇರಿ ವಿವಾದದಲ್ಲಿ ರಾಜ್ಯ ಸರ್ಕಾರದ ಪರ ವಾದ ಮಂಡಿಸುತ್ತಿರುವ ವಕೀಲರಾದ ಫಾಲಿ ಎಸ್ ನಾರಿಮನ್ ಅವರನ್ನು ರಾಜ್ಯದ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ಕಾನೂನು ಸಚಿವ ಟಿಬಿ ಜಯಚಂದ್ರ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸುತ್ತಿದ್ದಾರೆ.
ಜಲಸಂಕಷ್ಟ ಎದುರಾದಾಗ, ತಿಂಗಳಿಗೆ ಅಥವಾ ವಾರಕ್ಕೆ ಇಷ್ಟೇ ನೀರು ಬಿಡಬೇಕೆಂದು ಇಲ್ಲ. ರಾಜ್ಯಕ್ಕೆ ನೀರಿನ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯಕ್ಕೆ ನೀರು ಪೂರೈಕೆ ಮಾಡುವುದು ಕಷ್ಟ. ಈಗಾಗಲೇ ಮೆಟ್ಟೂರು ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹ ಇದ್ದು, ಸಂಕಷ್ಟ ವರ್ಷವಾಗಿದ್ದರೂ ಈ ವರ್ಷ ಮೆಟ್ಟೂರು ಜಲಾಶಯಕ್ಕೆ 90 ಟಿಎಂ ಸಿ ನೀರು ಹರಿಯುವ ಸಾಧ್ಯತೆ ಇದೆ. ಹೀಗಾಗಿ ಈಗಲೇ ನೀರು ಹರಿಸಿ ಎನ್ನುವುದು ಸರಿಯಲ್ಲ. ಹಾಗೂ ಜಲಾಶಯದಲ್ಲಿರುವ ನೀರು ಕಾವೇರಿ ಕಣಿವೆಯ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಗೆ ಮಾತ್ರ ಸೀಮಿತವಾಗಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಜಲಾಶಯಗಳ ಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ.
Advertisement