ಫ್ಸಾಸಿಸಂ ವಿರುದ್ಧವಾಗಿ ಸಾಂಸ್ಕೃತಿಕ ಪ್ರತಿರೋಧ ಚಳವಳಿ; ಶಿವಮೊಗ್ಗದಲ್ಲಿ ದಕ್ಷಿಣಾಯಣ

ದೇಶದಲ್ಲಿ ಹೆಚ್ಚುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ ಹರಣ, ವೈವಿಧ್ಯತೆ-ಬಹುತ್ವ ವಿರೋಧಿ ಪ್ರಕರಣಗಳಿಗೆ ವಿರುದ್ಧವಾಗಿ ಕರ್ನಾಟಕದ ಚಿಂತಕರು, ಲೇಖಕರು, ಸಾಮಾಜಿಕ ಕಾರ್ಯಕರ್ತರು ಒಟ್ಟಾಗಿ ಸೇರಿ
ಪತ್ರಿಕಾಘೋಷ್ಠಿ ಸಾಹಿತಿ ಪ್ರೊ. ರಾಜೇಂದ್ರ ಚೆನ್ನಿ, ಕವಿ ಪ್ರೊ. ಚಂದ್ರಶೇಖರ್ ಪಾಟೀಲ್ ಮತ್ತು ಪ್ರೊ. ಕೆ ವೈ ನಾರಾಯಣ ಸ್ವಾಮಿ
ಪತ್ರಿಕಾಘೋಷ್ಠಿ ಸಾಹಿತಿ ಪ್ರೊ. ರಾಜೇಂದ್ರ ಚೆನ್ನಿ, ಕವಿ ಪ್ರೊ. ಚಂದ್ರಶೇಖರ್ ಪಾಟೀಲ್ ಮತ್ತು ಪ್ರೊ. ಕೆ ವೈ ನಾರಾಯಣ ಸ್ವಾಮಿ
ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ ಹರಣ, ವೈವಿಧ್ಯತೆ-ಬಹುತ್ವ ವಿರೋಧಿ ಪ್ರಕರಣಗಳಿಗೆ ವಿರುದ್ಧವಾಗಿ ಕರ್ನಾಟಕದ ಚಿಂತಕರು, ಲೇಖಕರು, ಸಾಮಾಜಿಕ ಕಾರ್ಯಕರ್ತರು ಒಟ್ಟಾಗಿ ಸೇರಿ ಶಿವಮೊಗ್ಗದಲ್ಲಿ ದಕ್ಷಿಣಾಯಣ ಸಮಾವೇಶ ಆಯೋಜಿಸಿದ್ದಾರೆ. ಈ ಸಾಂಸ್ಕೃತಿಕ ಪ್ರತಿರೋಧ ಚಳವಳಿ ಶನಿವಾರ ಏಪ್ರಿಲ್ ೮ ರಂದು ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ. 
ಇಂದು ಬೆಂಗಳೂರಿನಲ್ಲಿ ಪತ್ರಿಕಾಘೋಷ್ಠಿ ನಡೆಸಿದ ಈ ಚಳುವಳಿಯಲ್ಲಿ ಭಾಗವಹಿಸುತ್ತಿರುವ ಸಾಹಿತಿ ಪ್ರೊ. ರಾಜೇಂದ್ರ ಚೆನ್ನಿ, ಕವಿ ಪ್ರೊ. ಚಂದ್ರಶೇಖರ್ ಪಾಟೀಲ್ ಮತ್ತು ಪ್ರೊ. ಕೆ ವೈ ನಾರಾಯಣ ಸ್ವಾಮಿ ಈ ಚಳವಳಿಯ ರೂಪುರೇಷೆಗಳನ್ನು ತಿಳಿಸಿದರು. 
"ಇಂದು ವಿಶ್ವವಿದ್ಯಾಲಯಗಳಲ್ಲಿ ಬೌದ್ಧಿಕ ಚರ್ಚೆಗಳನ್ನು ನಡೆಸಲು ಸಾಧ್ಯವಾಗದಂತಹ ಪರಿಸ್ಥಿಯಲ್ಲಿ ನಾವಿದ್ದೇವೆ. ಎಲ್ಲ ವಲಯಗಳಲ್ಲಿ ಫ್ಯಾಸಿಸ್ಟ್ ಚಿಂತನೆಗಳು ನಮ್ಮೆದುರು ಬಂದು ನಿಂತಿವೆ. ಇಂತಹ ಪರಿಸ್ಥಿತಿಯಲ್ಲಿ ಇದರ ವಿರುದ್ಧ ಗಟ್ಟಿಯಾಗಿ ಧ್ವನಿಯೆತ್ತಲು ಬಹುತೇಕ ಕನ್ನಡ ಎಲ್ಲ ಪ್ರಜ್ಞಾವಂತ ಬರಹಗಾರರು ಮತ್ತು ಚಿಂತಕರು ಶಿವಮೊಗ್ಗದಲ್ಲಿ ಒಟ್ಟಾಗಿ ಸೇರಿ ಮುಂದೆ ಮಾಡಬಹುದಾದ ಚಟುವಟಿಕೆಗಳ ನಿರ್ಣಯ ಕೈಗೊಳ್ಳಲಿದ್ದೇವೆ" ಎಂದ ರಾಜೇಂದ್ರ ಚೆನ್ನಿ "ಇದು ಸಂಸ್ಥೆಯಲ್ಲ, ಸಂಘಟನೆಯಲ್ಲ ಬದಲಾಗಿ ಸಾಂಸ್ಕೃತಿಕ ಪ್ರತಿರೋಧದ ಚಳವಳಿ" ಎನ್ನುತ್ತಾರೆ. 
"೧೯೭೫ ರ ತುರ್ತು ಪರಿಸ್ಥಿತಿಗೆ ವಿರೋಧವಾಗಲಿ, ಅಥವಾ ಇನ್ನಿತರ ಯಾವುದೇ ಮಹತ್ತರ ಸಾಮಾಜಿಕ ಕಳಕಳಿಯ ಚಳುವಳಿಗಳಾಗಲಿ ಅಕ್ಷರಗಳ ಮೂಲಕ ಕ್ರಿಯಾಶೀಲರಾಗಿ, ಬೆಂಬಲ ನೀಡಿದ್ದ ಕನ್ನಡ ಬರಹಗಾರರು ಈಗ ಮತ್ತೆ ಎದ್ದು ನಿಲ್ಲಬೇಕಿದೆ. ಮನುವಾದಿ ಸಂಸ್ಕೃತಿಯ ಪಡೆಗಳು ದೇಶದೆಲ್ಲೆಡೆ ಜಾಗೃತವಾಗಿವೆ. ಮತ್ತು ಅವುಗಳು ಸುಮ್ಮನಿರುವಂತೆ ಕಾಣುತ್ತಿಲ್ಲ. ಅವರ ಪರಂಪರೆಗೆ ನಾವು ಪ್ರತಿರೋಧವನ್ನು ಸದಾ ಜಾರಿಯಲ್ಲಿಡಬೇಕಿದೆ. ಈ ನಿಟ್ಟಿನಲ್ಲಿ ಈ ಸಾಂಸ್ಕೃತಿಕ ಆಂದೋಲನಕ್ಕೆ ನಾನು ಭಾಗಿಯಾಗಿದ್ದೇನೆ" ಎಂದು ಚಂಪಾ ಹೇಳಿದ್ದಾರೆ.
"ಜಾತಿ, ಮತ, ಪಕ್ಷ, ಧರ್ಮ, ಪಂಥಗಳನ್ನು ಮೀರಿ ಸಂವಿಧಾನದ ಮೌಲ್ಯಗಳನ್ನು ಉಳಿಸಿಕೊಳ್ಳಲು ನಾವೆಲ್ಲಾ ಒಟ್ಟಿಗೆ ಸೇರುತ್ತಾ ಇದ್ದೇವೆ" ಎಂದು ಕೂಡ ಚಂಪಾ ಹೇಳಿದ್ದಾರೆ. 
"ಬಹುತ್ವಕ್ಕೆ ಬಂದಿರುವ ಕೇಡಿನ ಬಗ್ಗೆ ಈಗ ಎಲ್ಲರಿಗು ಅರಿವಾಗುತ್ತಿದೆ. ಪ್ರಜಾಪ್ರಭುತ್ವ ಜನರ ಹಕ್ಕು. ಒಂದು ಮತದ ಶ್ರೇಷ್ಠತೆಯ ಅಹಂಕಾರದಿಂದ ಬಳಲುತ್ತಿರವವರಿಗೆ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇಲ್ಲ. ಅಂತಹವರಿಂದ ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ೧೨ ರಾಜ್ಯಗಳಲ್ಲಿ ಆಗಲೇ ಜಾರಿಯಲ್ಲಿರುವ ದಕ್ಷಿಣಾಯಣ ಆಂದೋಲನ ಕರ್ನಾಟಕಕ್ಕೆ ಕೂಡ ಕಾಲಿಟ್ಟಿದೆ. ಇದು ೩೦ ರಾಜ್ಯಗಳಿಗೆ ಹಬ್ಬಲಿದೆ" ಎಂದು ಕೆ ವೈ ನಾರಾಯಣಸ್ವಾಮಿ ಹೇಳಿದ್ದಾರೆ. 
ಏಪ್ರಿಲ್ ೮ ರಂದು ಶಿವಮೊಗ್ಗದ ನೌಕರರ ಭವನದಲ್ಲಿ ಬೆಳಗ್ಗೆ ೧೦ ಘಂಟೆಗೆ ಈ ಚಳುವಳಿಯನ್ನು ಚಂಪಾ ಉದ್ಘಾಟಿಸಲಿದ್ದಾರೆ. ಗಣೇಶ್ ದೇವಿ, ದೇವನೂರು ಮಹಾದೇವ, ರಾಜೇಂದ್ರ ಚೆನ್ನಿ, ಅಗ್ರಹಾರ ಕೃಷ್ಣಮೂರ್ತಿ, ರಹಮತ್ ತರೀಕೆರೆ, ಎಚ್ ಎಸ್ ರಾಘವೇಂದ್ರ ರಾವ್, ಕೆ ವಿ ನಾರಾಯಣ್ ಸೇರಿದಂತೆ ನೂರಾರು ಚಿಂತಕರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com