ಹಿರಿಯ ಗಾಂಧಿವಾದಿ, ಸಾಹಿತಿ ಹೊ. ಶ್ರೀನಿವಾಸಯ್ಯ ನಿಧನ

ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ...
ಗಾಂಧೀವಾದಿ ಹೊ.ಶ್ರೀನಿವಾಸಯ್ಯ(ಸಂಗ್ರಹ ಚಿತ್ರ)
ಗಾಂಧೀವಾದಿ ಹೊ.ಶ್ರೀನಿವಾಸಯ್ಯ(ಸಂಗ್ರಹ ಚಿತ್ರ)
ಬೆಂಗಳೂರು: ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ಹೊ. ಶ್ರೀನಿವಾಸಯ್ಯ ಅವರು ಇಂದು ನಿಧನರಾಗಿದ್ದಾರೆ.
ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನ ಹೊಂದಿದ ಶ್ರೀನಿವಾಸಯ್ಯ ಅವರು, ಮೂತ್ರಕೋಶದ ತೊಂದರೆಯಿಂದ ಬಳಲುತ್ತಿದ್ದರು.ಅವರಿಗೆ 93 ವರ್ಷ ವಯಸ್ಸಾಗಿತ್ತು.
2015ರಲ್ಲಿ ಅವರಿಗೆ ಗಾಂಧಿ ಸೇವಾ ಪ್ರಶಸ್ತಿ ನೀಡಿ ಕರ್ನಾಟಕ ಸರ್ಕಾರ ಗೌರವಿಸಿತ್ತು. 
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚೌದರಿ ಕೊಪ್ಪಲು ಗ್ರಾಮದವರಾದ ಶ್ರೀನಿವಾಸಯ್ಯನವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಮ್ಮ ಬದುಕಿನುದ್ದಕ್ಕೂ ಗಾಂಧಿ ತತ್ವವನ್ನೇ ಪಾಲಿಸಿಕೊಂಡು ಬಂದಿದ್ದರು.ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಸ್ಥಾನದವರೆಗೆ ಅವರು ಹೋರಾಟದ ಬದುಕನ್ನೇ ಕಂಡಿದ್ದರು. 
ಅವರು, 20,000 ಶಾಲಾ ಕಾಲೇಜುಗಳಲ್ಲಿ ಗಾಂಧಿ ಕುರಿತು ಪ್ರವಚನ ನೀಡಿ ಯುವ ಮನಗಳಿಗೆ ಕ್ರಿಯಾತ್ಮಕ ಆಯಾಮ ಕಟ್ಟಿಕೊಟ್ಟಿದ್ದರು. 200ಕ್ಕೂ ಹೆಚ್ಚು ಗಾಂಧಿ ಅಧ್ಯಯನ ಕೇಂದ್ರಗಳ ಸ್ಥಾಪನೆಗೆ ಕಾರಣರಾಗಿದ್ದಾರೆ. ಸಹಕಾರ ತತ್ವದ ಮೇಲೆ ಸಹಕಾರಿ ಬ್ಯಾಂಕ್‌ಗಳನ್ನು ಪ್ರಾರಂಭಿಸಿದ್ದರು. ಗಾಂಧೀಜಿಯವರ ಕುರಿತು ಹಲವಾರು ಕೃತಿ ರಚಿಸಿ, ಗಾಂಧಿಜೀಯವರ ಚಿಂತನೆಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಕಾರ್ಯ ಮಾಡಿದ್ದರು. ಅವರ  ‘ನಾ ಕಂಡ ಜರ್ಮನಿ' ಪುಸ್ತಕ ಶ್ರೇಷ್ಠ ಪ್ರವಾಸ  ಕಥನವಾಗಿ, ಪಠ್ಯವಾಗಿ ಸಾಹಿತ್ಯಾಸಕ್ತರ ಗಮನ ಸೆಳೆದಿದೆ.
ಹೊ. ಶ್ರೀನಿವಾಸಯ್ಯ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಂಬನಿ ಮಿಡಿದಿದ್ದಾರೆ. ಹೊ. ಶ್ರೀನಿವಾಸಯ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು ಬೆಳಗ್ಗೆ 10.30ಕ್ಕೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com