2018ರ ಚುನಾವಣೆ ಮೇಲೆ ಕಣ್ಣು: ಎತ್ತಿನ ಹೊಳೆ ಯೋಜನೆ ಕಾಮಗಾರಿಗೆ ರಾಜ್ಯ ಸರ್ಕಾರದ ಒತ್ತು

2018ರ ವಿಧಾನ ಸಭೆ ಚುನಾವಣೆ ಮೇಲೆ ಗಮನ ಕೇಂದ್ರೀಕರಿಸಿರುವ ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆ ಕಾಮಗಾರಿಯ ವೇಗ ಹೆಚ್ಚಿಸಲು ಮುಂದಾಗಿದೆ..
ಕೇಂದ್ರ ಅಧಿಕಾರಿಗಳಿಂದ ಸಕಲೇಶಪುರದಲ್ಲಿ ಪರಿಶೀಲನೆ
ಕೇಂದ್ರ ಅಧಿಕಾರಿಗಳಿಂದ ಸಕಲೇಶಪುರದಲ್ಲಿ ಪರಿಶೀಲನೆ
ಬೆಂಗಳೂರು: 2018ರ ವಿಧಾನ ಸಭೆ ಚುನಾವಣೆ ಮೇಲೆ ಗಮನ ಕೇಂದ್ರೀಕರಿಸಿರುವ ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆ ಕಾಮಗಾರಿಯ ವೇಗ ಹೆಚ್ಚಿಸಲು ಮುಂದಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಹಾಸನ ಮತ್ತು ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದೇ ಯೋಜನೆಯ ಉದ್ದೇಶವಾಗಿದೆ.
12,900 ಕೋಟಿ  ರು. ವೆಚ್ಚದ ಈ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಎತ್ತಿನಹೊಳೆ ನದಿಯಿಂದ 24.01 ಟಿಎಂಸಿ ನೀರನ್ನು ಆರು ಜಿಲ್ಲೆಗಳಿಗೆ ಪೂರೈಸುವುದಾಗಿದೆ. ಏಪ್ರಿಲ್ 2018ರ ಮುಂಚೆಗೆ ಯೋಜನೆಯ ಕಾಮಗಾರಿಯನ್ನು ಸಾದ್ಯವಾದಷ್ಟು ಮಟ್ಟಿಗೆ ಪೂರೈಸಲು ಸರ್ಕಾರದಿಂದ ಒತ್ತಡ ಬರುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆ ಹೊಂದಿರುವ ಯೋಜನೆ ದೀರ್ಘಕಾಲದ್ದಾಗಿದೆ, ಇದು ಪೂರ್ಣಗೊಳ್ಳಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ತಿಳಿದಿಲ್ಲ, ಮಾರ್ಚ್ 2018 ರ ವೇಳೆಗೆ ಶೇ.40 ರಷ್ಟು ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಎತ್ತಿನ ಹೊಳೆ ಯೋಜನೆ ಎಂಜನೀಯರ್ ಅಭಿಪ್ರಾಯ ಪಟ್ಟಿದ್ದಾರೆ.
ಎತ್ತಿನ ಹೊಳೆ ಮತ್ತು ಸಕಲೇಶಪುರ ಭಾಗದಲ್ಲಿ ಕಾಮಗಾರಿ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಆ ಭಾಗದ ಕಾಂಗ್ರೆಸ್ ಮುಖಂಡರು ಒತ್ತಡ ತರುತ್ತಿದ್ದಾರೆ. ಕಾಮಗಾರಿಯಲ್ಲಿ ಪ್ರಗತಿ  ಮುಂದಿನ ಚುನಾವಣೆಯಲ್ಲಿ ಮತಯಾಚನೆಗೆ ಸಹಾಯವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಮಾರ್ಚ್ 25 ರಂದು ಅಧಿಸೂಚನೆ ಹೊರಡಿಸಿದ ಕಂದಾಯ ಇಲಾಖೆ ,  ಭೂ ಸ್ವಾಧೀನ ಪ್ರಕ್ರಿಯೆಗಾಗಿ ವಿಶೇಷ ಅಧಿಕಾರಿಯನ್ನು ನೇಮಿಸಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಾಲುವೆ ನಿರ್ಮಿಸಲು ಸೂಚಿಸಿದೆ.
ಎಷ್ಟು ಸಾಧ್ಯವೋ ಅಷ್ಟು ಬೇಗ ಯೋಜನೆ ಪೂರ್ಣಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮ ಲಿ. ಮುಖ್ಯ ಎಂಜಿನೀಯರ್ ಸೆಲ್ವರಾಜ್ ಹೇಳಿದ್ದಾರೆ. ಮೊದಲ ಹಂತದಲ್ಲಿ ಎತ್ತಿನಹೊಳೆಯಿಂದ ಹಾರನಹಳ್ಳಿ ಜಲಾಶಯಕ್ಕೆ ನೀರು ಪೂರೈಸುವುದಾಗಿದೆ, ಇದು ಒಂದು ವರ್ಷದಲ್ಲಿ ಪೂರ್ಣಗೊಳ್ಳಬೇಕಿದೆ. 274 ಕಿಮೀ ಉದ್ದದ ಕಾಲುವೆಯಲ್ಲಿ, ಹಾರನಹಳ್ಳಿ ಜಲಾಯಶಯಿಂದ ಬೈರಂಗೂಡ್ಲು ಜಲಾಶಯದವರೆಗೆ  53 ಕಿಮೀ ಉದ್ದದ ಕಾಲುವೆ ನಿರ್ಮಾಣ ಮಾಡಬೇಕಿದೆ, ಒಂದು ವೇಳೆ ಭೂ ಸ್ವಾದೀನ ಪ್ರಕ್ರಿಯೆ ಶೀಘ್ರವಾಗಿ ನಡೆದರೇ ಇಡೀ ಯೋಜನೆ  ಸುಮಾರು 3ರಿಂದ 4 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಯೋಜನೆಯ  ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಅವಶ್ಯಕತೆಯಿರುವ ಕಡೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಐದು ಪ್ಯಾಕೇಜ್ ಗಳಿಗೆ ಟೆಂಡರ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.  ಹಾರನಹಳ್ಳಿಯಿಂದ ಬೈರಗುಂಡ್ಲೂ ಜಲಾಶಯಕ್ಕೆ ಹಾಸನ ಜಿಲ್ಲೆಯ ಅರಸಿಕೆರೆ ಮೂಲಕ ಕಾಲುವೆ ಸಂಪರ್ಕ ಕಲ್ಪಿಸಲಿದೆ, ಬೈರಗುಂಡ್ಲೂ ಜಲಾಶಯದಲ್ಲಿ ಸಂಗ್ರಹಿಸುವ ನೀರನ್ನು  ಕಾಲುವೆ ಮೂಲಕ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ಹರಿಸಲಾಗುವುದು, ಆದರೆ ಇದಕ್ಕೆ ಇನ್ನೂ ಮೂರು ವರ್ಷಗಳ ಕಾಲ ಸಮಯ ಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com