ಬಾಂಬ್ ನಾಗ ಹಾಗೂ ಮನೆಯಲ್ಲಿ ಸಿಕ್ಕ ಕಪ್ಪು ಹಣ
ರಾಜ್ಯ
ಕಪ್ಪು ಬಿಳಿ ದಂಧೆಯಲ್ಲಿ ಸಚಿವರು, ಅಧಿಕಾರಿಗಳು ಭಾಗಿ: ಹೊಸ 'ಬಾಂಬ್' ಸಿಡಿಸಿದ ನಾಗ
ತನ್ನ ಮನೆಯಲ್ಲಿ ಪತ್ತೆಯಾದ ನಿಷೇಧಿತ 500 ಹಾಗೂ 1000 ರುಪಾಯಿ ಮುಖಬೆಲೆಯ ಕೋಟ್ಯಂತರ ರುಪಾಯಿ ಹಣವೆಲ್ಲಾ ಪೊಲೀಸ್....
ಬೆಂಗಳೂರು: ತನ್ನ ಮನೆಯಲ್ಲಿ ಪತ್ತೆಯಾದ ನಿಷೇಧಿತ 500 ಹಾಗೂ 1000 ರುಪಾಯಿ ಮುಖಬೆಲೆಯ ಕೋಟ್ಯಂತರ ರುಪಾಯಿ ಹಣವೆಲ್ಲಾ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ಸೇರಿದ್ದು ಎಂದು ಮಾಜಿ ಕಾರ್ಪೋರೇಟರ್ ಹಾಗೂ ರೌಡಿಶೀಟರ್ ಬಾಂಬ್ ನಾಗ ಗಂಭೀರ ಆರೋಪ ಮಾಡಿದ್ದಾನೆ.
ಪೊಲೀಸರಿಂದ ತಲೆಮರೆಸಿಕೊಂಡಿರುವ ಬಾಂಬ್ ನಾಗ ಇಂದು ಅಜ್ಞಾತ ಸ್ಥಳದಿಂದ ವಿಡಿಯೊವೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಪೊಲೀಸರು ಕಪ್ಪು ಹಣದ ಕತೆ ಹೆಣೆದು ನನ್ನನ್ನು ಎನ್‌ಕೌಂಟರ್ ಮಾಡಲು ಬಂದಿದ್ದರು ಎಂದು ಹೊಸ ‘ಬಾಂಬ್’ ಸಿಡಿಸಿದ್ದಾರೆ. ಅಲ್ಲದೆ ವಿಡಿಯೋದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಮಂಜುನಾಥ್ ಅವರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.
ಬಾಂಬ್ ನಾಗನ ಪರ ವಕೀಲ ಈ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಖಾಸಗಿ ವಾಹಿನಿ ವರದಿ ಮಾಡಿದ್ದು, ವಿಡಿಯೊದಲ್ಲಿ ‘ನನ್ನ ಎನ್‌ಕೌಂಟರ್‌ಗೆ 10 ಕೋಟಿಯ ಡೀಲ್ ನಡೆದಿದೆ. ನಾನು ಪರಾರಿಯಾಗಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ನಾನು ಬೆಂಗಳೂರು ಬಿಟ್ಟು ಹೋಗಿಲ್ಲ. ಬೆಂಗಳೂರಿನಲ್ಲೇ ಇದ್ದೇನೆ’ ಎಂದು ಹೇಳಿದ್ದಾರೆ.
‘ಕಪ್ಪು ಹಣ ಬಿಳಿಯಾಗಿಸುವ ದಂಧೆಯಲ್ಲಿ ಹಲವು ಸಚಿವರು, ಐಎಎಸ್, ಐಪಿಎಸ್ ಅಧಿಕಾರಿಗಳೂ ಇದ್ದಾರೆ. ಪೊಲೀಸ್ ಅಧಿಕಾರಿಗಳೇ ಕಪ್ಪು ಹಣ ಬಿಳಿ ಮಾಡಿಕೊಳ್ಳಲು ನನ್ನ ಬಳಿ ಬರುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮಂಜುನಾಥ್ ಅವರು ಹಣವನ್ನು ಉಮೇಶ್ ಮತ್ತು ಕಿಶೋರ್ ಮೂಲಕ ಕಳುಹಿಸುತ್ತಿದ್ದರು. ನನ್ನ ಮನೆಗೆ ಬರುವ ವೇಳೆ ಸಿ.ಸಿ.ಟಿವಿ ಕ್ಯಾಮೆರಾ ಬಂದ್ ಮಾಡುತ್ತಿದ್ದೆ. ಕತ್ತಲಲ್ಲಿ ಬಂದು ಹೋಗುತ್ತಿದ್ದರು’ ಎಂದು ಆರೋಪಿಸಿದ್ದಾರೆ.
ನಾನು ಏನೂ ತಪ್ಪು ಮಾಡಿಲ್ಲ. ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಬಾರದು ಎಂದು ಸಂಚು ರೂಪಿಸಿ ಈ ರೀತಿ ಮಾಡಿರುವುದಾಗಿ ಆರೋಪಿಸಿರುವ ನಾಗ, ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಸಂಸದ ಪಿಸಿ ಮೋಹನ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನನ್ನ ಟಾರ್ಗೆಟ್ ಮಾಡಿರುವುದಾಗಿ ಬಾಂಬ್ ನಾಗ ನೇರವಾಗಿ ಉಲ್ಲೇಖಿಸಿದ್ದಾರೆ.
ನಾನು ವಾಸವಿರುವುದು ಶ್ರೀರಾಂಪುರದಲ್ಲಿ ಆದರೆ, ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಸರ್ಚ್ ವಾರೆಂಟ್ ಪಡೆದು ಪೊಲೀಸರು ಮನೆಗೆ ಬಂದಿದ್ದರು. ಅಂದು ನಾನು ಊರಿಗೆ ಹೋಗಿದ್ದೆ. ತಪ್ಪಿಸಿಕೊಂಡು ಹೋಗಿಲ್ಲ‘ ಎಂದು ಹೇಳಿದ್ದಾರೆ.
ಪೊಲೀಸರು ಕಾಸಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಕಾಸು ಪಡೆದು ನನ್ನ ವಿರುದ್ಧ ಗೂಬೆ ಕೂರಿಸಿದ್ದಾರೆ’ ಎಂದು ಪೊಲೀಸರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಮಾತನಾಡಿರುವ ನಾಗರಾಜ್, ನನ್ನ ಮೇಲೆ ಗೂಬೆ ಕೂರಿಸಿದರೆ ನಿನ್ನ ಹೆಂಡತಿ ಮಕ್ಕಳು ಕಷ್ಟ ಅನುಭವಿಸುತ್ತಾರೆ. ನಾನು ದಾನ, ಧರ್ಮದ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ ಅವರು, ಬಾಂಬ್ ನಾಗನನ್ನು ಬಂಧಿಸಬೇಕಾಗಿದೆ. ಆ ಕೆಲಸವನ್ನು ಪೊಲೀಸರು ಮಾಡುತ್ತಾರೆ. ಬಂಧನದ ಬಳಿಕ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಮತ್ತು ಆತನ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ