ಸಿಎಂ ತವರು ಕ್ಷೇತ್ರ ವರುಣಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗಿಲ್ಲ ಯಾವುದೇ ಸ್ಮಾರಕ!

ರಾಜಕಾರಣಿಗಳ ಸ್ಮಾರಕಗಳು ಹಾಗೂ ಹಲವು ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ನೀಡುವ ಸಿಎಂ ಸಿದ್ದರಾಮಯ್ಯ ...
ತಗಡೂರಿನಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ  ಘಟಕ
ತಗಡೂರಿನಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಘಟಕ
ಮೈಸೂರು: ರಾಜಕಾರಣಿಗಳ ಸ್ಮಾರಕಗಳು ಹಾಗೂ ಹಲವು ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ನೀಡುವ ಸಿಎಂ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರ ವರುಣಾದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣಕ್ಕೆ ಹಣ ನೀಡುತ್ತಿಲ್ಲ. 
ದಲಿತ ಮುಖಂಡರಾದ ಬಿ. ಬಸವಲಿಂಗಪ್ಪ, ಬಿ. ರಾಚಯ್ಯ, ಮತ್ತು ಎನ್ ರಾಚಯ್ಯ ಅವರ ಸಂಸ್ಥೆಗಳಿಗೆ ಸಾಕಷ್ಟು ಅನುದಾನ ನೀಡಿರುವ ಸಿಎಂ ಸಿದ್ದರಾಮಯ್ಯ, ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿರುವ ತಗಡೂರು ಗ್ರಾಮದ ರಾಮಚಂದ್ರರಾವ್ ಅವರ ಕುಟುಂಬ ಹಲವು ಬಾರಿ  ಅರ್ಜಿ ಸಲ್ಲಿಸಿದರೂ ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರೆ.
ತಗಡೂರಿನಲ್ಲಿರುವ ಜನತಾ ಹೈ ಸ್ಕೂಲ್ ಸಿಬ್ಬಂದಿ ಹಾಗೂ ತಗಡೂರು ಖಾದಿ ಸಂಸ್ಥೆ ಉದ್ಯೋಗಿಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 1989 ರಲ್ಲಿ ರಾಮಚಂದ್ರ ರಾವ್ ನಿಧನದ ನಂತರ, ಹಲವು ಬಾರಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.
ಸುಬ್ಬಣ್ಣ, ವೆಂಕಟ ಸುಬ್ಬಯ್ಯ ಹಾಗೂ ಎಂಎನ್ ಜೋಶಿ ಅವರ ಜೊತೆಗೂಡಿ ಮಹಾತ್ಮ ಗಾಂಧೀಜಿ ಅವರ ಗಮನ ಸೆಳೆದಿದ್ದರು, ಕ್ವಿಟ್ ಇಂಡಿಯಾ ಚಳುವಳಿ ವೇಳೆ ತಗಡೂರಿಗೆ ಭೇಟಿ ನೀಡಲು ಕಾರಣರಾಗಿದ್ದರು. ರಾವ್ ಗ್ರಾಮದಲ್ಲಿ ಉಚಿತ ಶಾಲೆ, ಖಾದಿ ಮತ್ತು ಗ್ರಾಮೋದ್ಯೋಗ ಘಟಕ ಸ್ಥಾಪಿಸಿದ್ದರು. 
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನಿರ್ಬಂದಿಸಲಾಗಿತ್ತು. ಈ ವೇಳೆ ಆಕ್ರೋಶಗೊಂಡ ರಾವ್ ತಗಡೂರಿನಿಂದ ಪಾದಯಾತ್ರೆ ಕೈಗೊಂಡು ದಲಿತರಿಗೆ ದೇವಾಲಯ ಪ್ರವೇಶಿಸಲು ಅವಕಾಶ ನೀಡುವಂತೆ ದೇವಾಸ್ಥಾನ ಪ್ರಾಧಿಕಾರಕ್ಕೆ ಆಗ್ರಹಿಸಿದ್ದರು.
ರಾವ್ ನಿಧನದ ವೇಳೆ ಅಂದು ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಖಾದಿ ಘಟಕದ ಅಭಿವೃದ್ಧಿ ಮತ್ತು ರಾವ್ ಅವರ ಸ್ಮಾರಕ ನಿರ್ಮಾಣಕ್ಕೆ ನಾಲ್ಕೂವರೆ ಎಕರೆ ಜಮೀನು ಕೊಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಆ ಕೆಲಸವಾಗಿಲ್ಲ.
ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಹೋರಾಡಿದ ಹಿರಿಯರ ತ್ಯಾಗ ಬಲಿದಾನಗಳಿಗೆ ಸರ್ಕಾರ ಗೌರವ ನೀಡುತ್ತಿಲ್ಲ, ತಗಡೂರು ಗ್ರಾಮವನ್ನು ಪ್ರಮುಖ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಸರ್ಕಾರ 3 ಕೋಟಿ ರು ಅನುದಾನ ನೀಡಬೇಕು ಎಂದು ತಗಡೂರಿನ ನಿವಾಸಿ ಗುರು ಎಂಬುವರು ಆಗ್ರಹಿಸಿದ್ದಾರೆ.
ಕಸಾಯಿ ಖಾನೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಹಣ ನೀಡಲು ಸಾಧ್ಯವಾಗುತ್ತದೆ ಆದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸುವ ಸಲುವಾಗಿ ರಾಮಚಂದ್ರರಾವ್ ಅವರ ಸ್ಮಾರಕ ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ತಮ್ಮದೆ ಹಣದಲ್ಲಿ ರಾಮಚಂದ್ರರಾವ್ ಅವರ ಸ್ಮಾರಕ ನಿರ್ಮಾಣ ಮಾಡಲಾಗುವುದು, ಮುಂದಿನ ಕೆಲವೇ ದಿನಗಳಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ತಗಡೂರಿನ ಮತ್ತೊಬ್ಬ ನಿವಾಸಿ ವಿಜಯಮೂರ್ತಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com