ಪ್ರತಿಭಟನೆಯ ರೂಪವಾಗಿ ಸೈಕಲ್ ನಲ್ಲಿ ಕಚೇರಿಗೆ ಬಂದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯ್

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ-ಇ ಆಡಳಿತ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಕಿರುಕುಳ...
ಕೆಎಎಸ್ ಹಿರಿಯ ಅಧಿಕಾರಿ ಕೆ.ಮಥಾಯ್
ಕೆಎಎಸ್ ಹಿರಿಯ ಅಧಿಕಾರಿ ಕೆ.ಮಥಾಯ್
ಬೆಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ-ಇ ಆಡಳಿತ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೆಎಎಸ್ ಹಿರಿಯ ಅಧಿಕಾರಿ ಕೆ.ಮಥಾಯ್ ಇಂದು ಬೆಳಗ್ಗೆ ಸೈಕಲ್ ನಲ್ಲಿ ಕಚೇರಿಗೆ ಆಗಮಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಾಗರಿಕ ಸ್ನೇಹಿ ಸೇವೆಗಳನ್ನು ಜನರಿಗೆ ನಿಗದಿತ ಕಾಲಾವಧಿಯೊಳಗೆ ಒದಗಿಸಲು 2011ರಲ್ಲಿ ಜಾರಿಗೆ ಬಂದ ಸಕಲ ಸೇವಾ ಕಾಯ್ದೆಯನ್ನು ಮುಚ್ಚಲು ಕೆಲವು ಅಧಿಕಾರಿಗಳು ಪಿತೂರಿ ನಡೆಸುತ್ತಿದ್ದಾರೆ ಎಂದು ಕೂಡ ಆರೋಪಿಸಿದ್ದಾರೆ. 
ಸಕಲ ಯೋಜನೆಯ ಸಹಾಯಕ ಆಯುಕ್ತ ಮತ್ತು ಆಡಳಿತಾತ್ಮಕ ಅಧಿಕಾರಿಯಾಗಿರುವ ಕೆ. ಮಥಾಯ್, ಇಂದು ಬೆಳಗ್ಗೆ ದೊಡ್ಡಬಳ್ಳಾಪುರ ರಸ್ತೆಯ ರಾಜನುಕುಂಟೆಯಲ್ಲಿರುವ ತಮ್ಮ ನಿವಾಸದಿಂದ ಸೈಕಲ್ ನಲ್ಲಿ ಕಚೇರಿಗೆ ಬಂದಿದ್ದರು. ಅವರ ಮನೆಯಿಂದ ಕಚೇರಿಗೆ ಸುಮಾರು 25 ಕಿಲೋ ಮೀಟರ್ ದೂರವಿದೆ. ಬೆಳಗ್ಗೆ 8.15ರ ಸುಮಾರಿಗೆ ಮನೆಯಿಂದ ಹೊರಟ ಮಥಾಯ್ ವಿಧಾನ ಸೌಧದ ಹತ್ತಿರವಿರುವ ಎಂ.ಎಸ್.ಬಿಲ್ಡಿಂಗ್ ನ ತಮ್ಮ ಕಚೇರಿಗೆ ಬೆಳಗ್ಗೆ 10 ಗಂಟೆಗೆ ತಲುಪಿದರು.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿ ಜೊತೆಗೆ ಮಾತನಾಡಿದ ಮಥಾಯ್, ಕಳೆದ 11 ತಿಂಗಳಿನಿಂದ ತಮ್ಮ ಕಚೇರಿ ವಾಹನಕ್ಕೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಸೈಕಲ್ ನಲ್ಲಿ ಬಂದೆ ಎಂದು ಹೇಳಿದ್ದಾರೆ.
ತಾವು ಸಂಚರಿಸುವ ಕಚೇರಿ ವಾಹನಕ್ಕೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲೆಂದೇ ಹಣ ಪಾವತಿಸಿಲ್ಲ. ಶುಲ್ಕ ಪಾವತಿಸದಿರುವುದರಿಂದ ಏಜೆನ್ಸಿ ವಾಹನ ಕಳುಹಿಸುವುದನ್ನು ರದ್ದುಗೊಳಿಸಿದೆ. ಹೀಗಾಗಿ ಸೈಕಲ್ ಮೂಲಕ ಬಂದು ಸಾತ್ವಿಕ ಮಾರ್ಗದ ಮೂಲಕ ಪ್ರತಿಭಟನೆ ನಡೆಸುತ್ತಿದ್ದೇನೆ. ಇದೊಂದೇ ನನಗೆ ಉಳಿದಿರುವ ದಾರಿ ಎಂದರು.
ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ಸಿ.ಕುಂಟಿಯಾ ಅವರಿಗೆ ವಿವರವಾದ ವರದಿ ಕಳುಹಿಸಿರುವ ಮಥಾಯ್, ಸಕಲ ಯೋಜನೆಯನ್ನು ನಿಲ್ಲಿಸಲು ಕೆಲ ಹಿರಿಯ ಐಎಎಸ್ ಅಧಿಕಾರಿಗಳು ಪಿತೂರಿ ನಡೆಸುತ್ತಿದ್ದಾರೆ ಎಂದು ಆಪಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com