ಮೈಸೂರು: ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಮೈಸೂರು ಮೂಲದ ತಂದೆ-ಮಗ 25 ವರ್ಷಗಳ ನಂತರ ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಸಯ್ಯದ್ ಅಬ್ಬಾಸ್ (46) ಹಾಗೂ ಅವರ ಪುತ್ರ ಸೈಯ್ಯದ್ ಹತೀಕ್ (20) ಮಂಗಳವಾರ ಇಲ್ಲಿನ ಆರ್ಯ ಭವನದಲ್ಲಿ ಸಂಪ್ರದಾಯದ ಪ್ರಕಾರ ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡರು.
ಮಂಡ್ಯ ಮೂಲದವರಾದ ಗೋವಿಂದರಾಜು ಅವರ ಪುತ್ರ ಶೇಷಾದ್ರಿ 25 ವರ್ಷಗಳ ಹಿಂದೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಸೈಯ್ಯದ್ ಅಬ್ಬಾಸ್ ಎಂದು ಹೆಸರು ಬದಲಿಸಿಕೊಂಡಿದ್ದರು. ನಂತರ ಮುಸ್ಲಿಂ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು, ಇದರಿಂದಾಗಿ ಅವರು ತಮ್ಮ ಸಂಬಂಧಿಕರಿಂದ ದೂರಾಗಿದ್ದರು.
ನಂತರ ನಡೆದ ಹಲವು ಘಟನೆಗಳಿಂದ ಅಸಮಾಧಾನ ಗೊಂಡ ಸೈಯ್ಯದ್ ಅಬ್ಬಾಸ್ ಹಿಂದೂ ಧರ್ಮಕ್ಕೆ ಮರಳಲು ಜನವರಿ 2017 ರಲ್ಲಿ ಶ್ರೀರಾಮ ಸೇನೆ ನೆರವು ಕೋರಿದ್ದರು.
ಅವರ ಮನವಿಗೆ ಸ್ಪಂದಿಸಿದ ಶ್ರೀರಾಮ ಸೇನೆ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳ ಮೂಲಕ ಹಿಂದೂ ಧರ್ಮಕ್ಕೆ ಮರಳಿದರು. ಈ ವೇಳೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಸಹ ಹಾಜರಿದ್ದರು.
ಮತಾಂತರಗೊಂಡ ನಂತರ ಸೈಯ್ಯದ್ ಅಬ್ಬಾಸ್ ಅವರು ಶೇಷಾದ್ರಿಯಾಗಿ ಹಾಗೂ ಪುತ್ರ ಸೈಯ್ಯದ್ ಹತೀಕ್ ಅವರು ಹರ್ಷಿಲ್ ಆರ್ಯ ಎಂದು ಹೆಸರು ಬದಲಿಸಿಕೊಂಡಿದ್ದಾರೆ