ನವೆಂಬರ್ 1ರಿಂದ ರಾಜ್ಯದ ಜನತೆಗೆ ಹೆಲ್ತ್ ಕಾರ್ಡ್‌: ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ

ರಾಜ್ಯದ 1.40 ಕೋಟಿ ಕುಟುಂಬಗಳಿಗೂ ಏಕರೂಪದ ಆರೋಗ್ಯ ಭಾಗ್ಯ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಮವಾರ ನಡೆದ ಸಂಪುಟ ಸಭೆಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ 1.40 ಕೋಟಿ ಕುಟುಂಬಗಳಿಗೂ ಏಕರೂಪದ ಆರೋಗ್ಯ ಭಾಗ್ಯ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ, ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್‌ 1ರಿಂದ ರಾಜ್ಯದ ಎಲ್ಲ ನಾಗರಿಕರಿಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ನೀಡುವ ‘ಸಾರ್ವತ್ರಿಕ ಆರೋಗ್ಯ ಕಾರ್ಡ್‌’ಯೋಜನೆ ಜಾರಿಗೆ ಬರಲಿದೆ.
ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ ಸೇರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಏಳು ಪ್ರಮುಖ ಆರೋಗ್ಯ ಯೋಜನೆಗಳನ್ನು ಸಾರ್ವತ್ರಿಕ ಆರೋಗ್ಯ ಕಾರ್ಡ್‌ ವ್ಯಾಪ್ತಿಯಡಿ ತರಲಾಗುವುದು. ಪಿಎಲ್‌, ಬಿಪಿಎಲ್‌ ಕಾರ್ಡ್‌ ಹೊಂದಿರುವ ಮತ್ತು ಸಹಕಾರ ಸಂಘದ ಸದಸ್ಯರು ತಮ್ಮ ಆಧಾರ್‌ ಕಾರ್ಡ್‌ ನಂಬರ್‌ ನೀಡಿ ನೋಂದಣಿ ಮಾಡಿಕೊಂಡರೆ, ಆರೋಗ್ಯ ಇಲಾಖೆಯಿಂದ ಉಚಿತ ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ದೊರೆಯುತ್ತದೆ. ಅರ್ಹ ಕುಟುಂಬಗಳು ಆರೋಗ್ಯ ಕಾರ್ಡ್‌ಗೆ ಆಧಾರ್‌ ಜೋಡಣೆ ಮಾಡಬೇಕು. ಬಳಿಕ ಅವರು ಸರ್ಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅರ್ಹರಾಗುತ್ತಾರೆ. 
ಈಗಾಗಲೇ ಸಹಕಾರ ಸಂಘಗಳ ಆರೋಗ್ಯ ಯೋಜನೆಗಳಡಿ ನೋಂದಣಿ ಆಗಿರುವ 2.38 ಕೋಟಿ ಸದಸ್ಯರು ಯೋಜನೆಗಾಗಿ ಹಣ ನೀಡಬೇಕಾಗಿಲ್ಲ. ಮಿಕ್ಕ 30 ಲಕ್ಷ ಕುಟುಂಬಗಳನ್ನು ಆಧಾರ್‌ ವಿವರಗಳೊಂದಿಗೆ ಆನ್‌ಲೈನ್‌ನಲ್ಲಿ ನೋಂದಾಯಿಸಲಾಗುತ್ತದೆ. ಇದರಡಿ, ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬ 300 ರು. ಮತ್ತು ನಗರ ಪ್ರದೇಶದ ಪ್ರತಿ ಕುಟುಂಬ 700 ರು, ಪಾವತಿ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ
ಅಪಘಾತದಂಥ ತುರ್ತು ಸಂದರ್ಭಗಳಲ್ಲಿ ‘ಚಿಕಿತ್ಸೆ ಮೊದಲು, ಪಾವತಿ ನಂತರ’ ತತ್ವದ ಆಧಾರದಲ್ಲಿ ಸಮೀಪದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಮೊದಲ 48 ಗಂಟೆಗಳಿಗೆ ರು. 25,000 ಗಳವರೆಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸುತ್ತದೆ ಎಂದು ಜಯಚಂದ್ರ ಹೇಳಿದ್ದಾರೆ. 
ದ್ವಿತೀಯ ಹಂತದ 1000 ಸಣ್ಣಪುಟ್ಟ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ‘ಎ ವರ್ಗ’ದ ರೋಗಿಗಳಿಗೆ ದ್ವಿತೀಯ ಹಂತದ 516 ಗಂಭೀರ ಸ್ವರೂಪದ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳ ಮೂಲಕ ಉಚಿತ ಚಿಕಿತ್ಸೆ ನೀಡಲಾಗುತ್ತದೆ. 
‘ಬಿ ವರ್ಗ’ದ ರೋಗಿಗಳು ಭಾಗಶಃ ಪಾವತಿ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇವರಿಗೆ ನಿಗದಿಪಡಿಸಿದ ಪ್ಯಾಕೇಜ್‌ ದರದಲ್ಲಿ ಶೇ.30 ರಷ್ಟನ್ನು ಸರ್ಕಾರವೇ ಪಾವತಿಸುತ್ತದೆ .ತೃತೀಯ ಹಂತದ 663 ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಆದರೆ, ‘ಬಿ ವರ್ಗ’ದ ರೋಗಿಗಳಿಗೆ ನಿಗದಿ ಮಾಡಿದ ಪ್ಯಾಕೇಜ್‌ ದರದಲ್ಲಿ ಶೇ 30 ರಷ್ಟು ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ವಿವರಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ದರವನ್ನು ಸರ್ಕಾರವೇ ನಿಗದಿ ಮಾಡಲಿದ್ದು, ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಗೆ ಅಂಗೀಕಾರ ಸಿಗುವವರೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ದರಗಳೇ ಅನ್ವಯವಾಗಲಿವೆ ಎಂದೂ ಸಚಿವರು ತಿಳಿಸಿದರು.
‘ಎ ವರ್ಗ’ದ ಫಲಾನುಭವಿಗಳು: ರೈತ ಕುಟುಂಬಗಳು, ಅನುದಾನಿತ ಶಾಲಾ ಕಾಲೇಜು ಉಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತರು, ಬಿಸಿ ಊಟ ಮತ್ತು ಆಶಾ ಕಾರ್ಯಕರ್ತೆಯರು, ಇಎಸ್‌ಐ ಸೌಲಭ್ಯ ವಂಚಿತ ಇತರೆ ಕುಟುಂಬಗಳು, ಅಸಂಘಟಿತ ಕಾರ್ಮಿಕ ವರ್ಗ, ಆಟೋ ಚಾಲಕರು, ದಿನಗೂಲಿ ಕಾರ್ಮಿಕರು, ಚಿಂದಿ ಆಯುವವರು, ಗಣಿ ಕಾರ್ಮಿಕರು, ರಸ್ತೆ ವ್ಯಾಪಾರಿಗಳು, ಕಟ್ಟಡ ನಿರ್ಮಾಣ ಕೆಲಸಗಾರರು, ನೇಕಾರರು, ನೈರ್ಮಲ್ಯ ಕೆಲಸಗಾರರು, ನರೇಗಾ ಕಾರ್ಮಿಕರು, ಎಸ್ಸಿ, ಎಸ್ಟಿ ಪಂಗಡದವರು, ಪೌರ ಕಾರ್ಮಿಕರು, ಪ್ರಾಣಿ ಕಡಿತದ ಸಂತ್ರಸ್ತರು, ಮಾಧ್ಯಮದವರು, ಸಹಕಾರಿ ಸಂಘಗಳ ಸದಸ್ಯರು, ಸರ್ಕಾರಿ ನೌಕರರು ಹಾಗೂ ರಾಜಕಾರಣಿಗಳು.
‘ಬಿ ವರ್ಗ’ದ ಫಲಾನುಭವಿಗಳು: ಎ ವರ್ಗದಲ್ಲಿ ಸೇರಿರದ ಇತರ ವರ್ಗದ ಜನರು, ಐಟಿ,ಬಿಟಿ ಉದ್ಯೋಗಿಗಳು, ಆದಾಯ ತೆರಿಗೆ ಸಲ್ಲಿಸುವ ವ್ಯಾಪಾರಿಗಳು, ಉದ್ಯಮಿಗಳು, ರಾಜ್ಯದಲ್ಲಿ ವಾಸವಿರುವ (ಆಧಾರ ಕಾರ್ಡ್‌ ಹೊಂದಿರುವ) ಹೊರ ರಾಜ್ಯ ಹಾಗೂ ಹೊರ ದೇಶದ ಪ್ರಜೆಗಳು.
ರಾಜ್ಯ ಮತ್ತು ಕೇಂದ್ರ ಪ್ರಾಯೋಜಿತ ಆರೋಗ್ಯ ಯೋಜನೆಗಳಿಗೆ ಒಟ್ಟು 1022 ಕೋಟಿ ಅನುದಾನ ಸಿಗುತ್ತಿದೆ. ಈ ಹಣವನ್ನು ಸಾರ್ವತ್ರಿಕ ಆರೋಗ್ಯ ಕಾರ್ಡ್‌ ಯೋಜನೆಗೆ ಬಳಸಿಕೊಳ್ಳಲಾಗುವುದು. ಸಮಾಜದ ಎಲ್ಲ ಸ್ತರದ ಜನರಿಗೆ ಒಂದಿಲ್ಲೊಂದು ರೀತಿಯಲ್ಲಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವುದು. 1.5 ಲಕ್ಷದಿಂದ 2 ಲಕ್ಷ ರೂ. ವರೆಗಿನ ಶಸ್ತ್ರಚಿಕಿತ್ಸೆಗೆ ಸರ್ಕಾರವೇ ವೆಚ್ಚ ಭರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com