ಬೆಳಗಾವಿ: ಕಳ್ಳಬಟ್ಟಿ ಕಳ್ಳರನ್ನು ಹಿಡಿಯಲೆಂದು ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ ಆರೋಪಿಯೊಬ್ಬ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಹೊನಗಾ ಗ್ರಾಮದ ಬಳಿ ಈ ಘಟನೆ ನಡೆದಿದ್ದು ಗ್ರಾಮದಲ್ಲಿ ಕಳ್ಳ ಭಟ್ಟಿ ಸರಾಯಿ ಸಾಗಿಸುತ್ತಿದ್ದ ಶಂಕಿತನನ್ನು ಅಬಕಾರಿ ಪೊಲೀಸರು ಬೆನ್ನಟ್ಟಿದಾಗ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಅಡಿವೆಪ್ಪ (24) ಸಾವನ್ನಪ್ಪಿದ್ದಾನೆ. ಘಟನೆಯ ಬಳಿಕ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಇಂದು ಬೆಳಗಿನ ಜಾವ ಮೂವರು ಕಳ್ಳ ಭಟ್ಟಿ ದಂಧೆಕೋರರ ಮೇಲೆ ಪೋಲೀಸರು ದಾಳಿ ನಡೆಸಿದ್ದು ಆ ಸಮಯ ಅಡಿವೆಪ್ಪ ಬೈಕಿನಲ್ಲಿ ಕಳ್ಳಬಟ್ಟಿ ಸಮೇತ ಪರಾರಿಯಾಗಲು ಪ್ರಯತ್ನ ಮಾಡಿದ್ದಾನೆ. ಆಗ ಪೋಲೀಸರು ಆತನನ್ನು ಬಿಡದೆ ಹಿಂಬಾಲಿಸಿದ್ದಾರೆ ಆಗ ಆತ ಬಾವಿಗೆ ಬಿದ್ದಿದ್ದಾನೆ, ಅಲ್ಲಿಯೇ ಮೃತಪಟ್ಟಿದ್ದಾನೆ.
ಆರೋಪಿ ಸಾವಿನಿಂದ ಬಿಗುವಿನ ವಾತಾವರಣ ಉಂಟಾಗಿದ್ದು ಆತನ ಸಾವಿಗೆ ಅಬಕಾರಿ ಪೊಲೀಸರು ನೇರ ಹೊಣೆ ಎಂದು ಆತನ ಸಂಬಂಧಿಕರು ಆರೋಪಿಸಿದ್ದಾರೆ. ಆತನನ್ನು ಅಬಕಾರಿ ಪೊಲೀಸರೇ ಹೊಡೆದು ಬಾವಿಗೆ ಹಾಕಿದ್ದಾರೆ ಎಂದು ಆರೋಪಿಸಿರುವ ಬಂಧುಗಳು ಅಬಕಾರಿ ಕಚೇರಿ ಮೇಲೆ ದಾಳಿ ನಡೆಸಿ ಗಾರ್ಡ್ ಏಕನಾಥ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಏಕನಾಥ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯು ಬಾವಿಗೆ ಬಿದ್ದು ಪ್ರಾಣಹೋಗುತ್ತಿದೆ ಎಂದರೂ ಬಕಾರಿ ಸಿಬಂದಿಗಳು ಅವನನ್ನು ರಕ್ಷಿಸಲು ಮುಂದಾಗಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದೆ.ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.