ಮಹಿಳಾ ಪ್ರಯಾಣಿಕಗೆ ಲೈಂಗಿಕ ಕಿರುಕುಳ: ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕನ ಬಂಧನ

ಬೆಂಗಳೂರಿಗೆ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನ ನಿರ್ವಾಹಕನೊಬ್ಬ ಕುಣಿಗಲ್ ಸಮೀಪ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತುಮಕೂರು: ಬೆಂಗಳೂರಿಗೆ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನ ನಿರ್ವಾಹಕನೊಬ್ಬ ಕುಣಿಗಲ್ ಸಮೀಪ ನಿನ್ನೆ ನಸುಕಿನ ವೇಳೆ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಪ್ರಕರಣ ನಡೆದಿದೆ. 
ಮಹಿಳೆ ನಿರ್ವಾಹಕರಿಗೆ ಎಚ್ಚರಿಕೆ ನೀಡುತ್ತಿದ್ದಂತೆ ಮತ್ತಿಬ್ಬರು ಮಹಿಳಾ ಪ್ರಯಾಣಿಕರು ನಿರ್ವಾಹಕ ಜೊಹರ್ ಅಹ್ಮದ್ ಅವರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ನಿರ್ವಾಹಕನ ಮೇಲೆ ಐಪಿಸಿ ಸೆಕ್ಷನ್ 354ರಡಿ ಕೇಸು ದಾಖಲಿಸಿ ಕೋರ್ಟಿಗೆ ಒಪ್ಪಿಸಿದ್ದು, ನಿರ್ವಾಹಕನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಬೆಂಗಳೂರಿನ ಬನ್ನೇರುಘಟ್ಟ ಮೂಲದ ವೃತ್ತಿಯಲ್ಲಿ ನರ್ಸ್ ಆಗಿರುವ ಮಹಿಳೆ ಹಾಸನದಿಂದ ಬಸ್ಸು ಹತ್ತಿದ್ದರು. ಬೇರೆಲ್ಲಾ ಸೀಟುಗಳು ಭರ್ತಿಯಾಗಿದ್ದರಿಂದ ನಿರ್ವಾಹಕನ ಪಕ್ಕದ ಸೀಟು ಖಾಲಿ ಇದ್ದರಿಂದ ಮಹಿಳೆ ಅಲ್ಲಿ ಹೋಗಿ ಕುಳಿತುಕೊಂಡರು.ಪಕ್ಕದ ಸೀಟಿನಲ್ಲಿ ಬಂದು ಕುಳಿತ ನಿರ್ವಾಹಕ ವಿದ್ಯುತ್ ದೀಪದ ಸ್ವಿಚ್ ಆಫ್ ಮಾಡಿ ಮಹಿಳೆಯ ಮೈ ಸ್ಪರ್ಶಿಸಲು ಆರಂಭಿಸಿದ.
ಮಹಿಳೆ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಬಸ್ಸು ಹಿರಿಸಾವೆ ಪಟ್ಟಣದ ಹತ್ತಿರ ತಲುಪಿದಾಗ ನಿರ್ವಾಹಕ ಮತ್ತಷ್ಟು ಕಿರುಕುಳ ನೀಡಲಾರಂಭಿಸಿದ. ಆಗ ಮಹಿಳೆ ಗಟ್ಟಿಯಾಗಿ ಕಿರುಚಿಕೊಂಡರು. ಸಹ ಪ್ರಯಾಣಿಕರು ವಿಷಯ ಏನೆಂದು ತಿಳಿದು ನಿರ್ವಾಹಕನಿಗೆ ಹೊಡೆದು ಕುಣಿಗಲ್ ಪೊಲೀಸ್ ಠಾಣೆಯ ಕಡೆಗೆ ಬಸ್ಸನ್ನು ಕರೆದುಕೊಂಡು ಹೋದರು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಕುಣಿಗಲ್ ಡಿಪೊ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ, ಹಾಸನದ ವಿಭಾಗೀಯ ಆಯುಕ್ತರಿಗೆ ಘಟನೆಯ ಸಂಪೂರ್ಣ ವಿವರಗಳನ್ನು ನೀಡುತ್ತೇವೆ. ನಿರ್ವಾಹಕರು ಹಳೆನರಸೀಪುರ ಡಿಪೊಗೆ ಸೇರುತ್ತಾರೆ ಎಂದರು.
ಈ ಮಧ್ಯೆ, ವಿಭಾಗೀಯ ಭದ್ರತಾ ಇನ್ಸ್ ಪೆಕ್ಟರ್ ರಘು ಕುಣಿಗಲ್ ಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಮೇಲಾಧಿಕಾರಿಗಳು ನಿರ್ವಾಹಕನನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಲಿದ್ದಾರೆ ಎಂದರು. 
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಳೆ, ತಮ್ಮ ರಕ್ಷಣೆಗೆ ಬಂದ ಮತ್ತಿಬ್ಬರು ಮಹಿಳೆಯರಿಗೆ ಧನ್ಯವಾದ ಹೇಳಿದರು. ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ರಕ್ಷಣೆ ಬಗ್ಗೆ ಪ್ರತಿಕ್ರಿಯಿಸುವಷ್ಟು ತಾವು ದೊಡ್ಡ ಮನುಷ್ಯಳಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com