ಬೆಂಗಳೂರು: ನಗರದ ಅಪಾರ್ಟ್ ಮೆಂಟ್ ಮಾಲೀಕರ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕಡ್ಡಾಯವಾಗಿ ಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕೆಂಬ ನಿರ್ಧಾರದಿಂದ ಹಿಂದೆ ಸರಿದಿದೆ.
ಡಿಸೆಂಬರ್ 31ರೊಳಗೆ ಎಲ್ಲಾ ಅಪಾರ್ಟ್ ಮೆಂಟ್ ಗಳಲ್ಲಿ ಕಡ್ಡಾಯವಾಗಿ ಚರಂಡಿ ಸಂಸ್ಕರಣ ಘಟಕಗಳನ್ನು ನಿಯೋಜಿಸಬೇಕೆಂಬ ನಿರ್ಧಾರವನ್ನು ಹಿಂತೆಗೆದುಕೊಂಡಿರುವ ಸರ್ಕಾರ, ಇದೀಗ 20 ಫ್ಲಾಟ್ ಗಳಿರುವ ಅಥವಾ ಅದಕ್ಕಿಂತ ಹೆಚ್ಚು 50ಕ್ಕಿಂತ ಕಡಿಮೆ ಫ್ಲಾಟ್ ಗಳನ್ನು ಹೊಂದಿರುವ ಅಪಾರ್ಟ್ ಮೆಂಟ್ ಸಂಕೀರ್ಣಗಳಿಗೆ ಚರಂಡಿ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವುದರಿಂದ ವಿನಾಯ್ತಿ ನೀಡಲಾಗಿದೆ.
ಈ ಕುರಿತು ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಗೆ ಸಂಪರ್ಕಗೊಂಡ ಅಪಾರ್ಟ್ ಮೆಂಟ್ ಸಂಕೀರ್ಣಗಳು ಸಂಸ್ಕರಣ ಘಟಕಗಳನ್ನು ಮತ್ತೊಮ್ಮೆ ಸ್ಥಾಪಿಸಬೇಕಾಗಿಲ್ಲ. 50ಕ್ಕಿಂತ ಹೆಚ್ಚು ಫ್ಲಾಟ್ ಗಳಿರುವ ಅಪಾರ್ಟ್ ಮೆಂಟ್ ಗಳು 2016, ಜನವರಿ 19ರ ನಂತರ ನಿರ್ಮಿಸಿದ ಅಪಾರ್ಟ್ ಮೆಂಟ್ ಗಳಿಗೆ ಸಂಸ್ಕರಣ ಘಟಕಗಳನ್ನು ಸ್ಥಾಪಿಸಬೇಕು. ಆದರೂ ಬಿಡಬ್ಲ್ಯುಎಸ್ಎಸ್ ಬಿಗೆ ಸಂಪರ್ಕಿಸದ ಅಪಾರ್ಟ್ ಮೆಂಟ್ ಗಳಿಗೆ ಕಡ್ಡಾಯವಾಗಿ ಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು.
ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ದಾಸರಹಳ್ಳಿ ಮತ್ತು ಬ್ಯಾಟರಾಯನಪುರ ವಲಯಗಳಲ್ಲಿ ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಗೊಂಡ ಪ್ರದೇಶಗಳಲ್ಲಿನ ಅಪಾರ್ಟ್ ಮೆಂಟ್ ಗಳು ಚರಂಡಿ ಸಂಸ್ಕರಣಾ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸದಿರುವ ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಜನವರಿ 1ರಿಂದ ದಂಡ ವಿಧಿಸಲಾಗುವುದು ಎಂದು ಬಿಡಬ್ಲ್ಯುಎಸ್ಎಸ್ ಬಿ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ದಂಡ ಹೇರಿಕೆ ಷರತ್ತನ್ನು ತೆಗೆದುಹಾಕಿರುವುದರಿಂದ ಜನವರಿ 1ರಿಂದ ದಂಡ ತೆರಬೇಕಾಗಿಲ್ಲ ಎಂದು ಜಲಮಂಡಳಿ ಅಧ್ಯಕ್ಷ ತುಶಾರ್ ಗಿರಿನಾಥ್ ತಿಳಿಸಿದ್ದಾರೆ.