ಸಾಂದರ್ಭಿಕ ಚಿತ್ರ
ರಾಜ್ಯ
ಬೆಂಗಳೂರಿನ ಕೆರೆ ಸಮಸ್ಯೆಗೆ ಕನ್ನಡಿಯಂತಿರುವ ಕಾಶ್ಮೀರದ ಸಾಕ್ಷ್ಯಚಿತ್ರ
ಸೇವಿಂಗ್ ದ ಸೇವಿಯರ್(ಸಂರಕ್ಷಕರನ್ನು ಉಳಿಸಿ) ಎಂಬ ಕಾಶ್ಮೀರದ 15 ವರ್ಷದ ಬಾಲಕನ ಬಗ್ಗೆ ನಿರ್ಮಿಸಿರುವ...
ಬೆಂಗಳೂರು: ಸೇವಿಂಗ್ ದ ಸೇವಿಯರ್(ಸಂರಕ್ಷಕರನ್ನು ಉಳಿಸಿ) ಎಂಬ ಕಾಶ್ಮೀರದ 15 ವರ್ಷದ ಬಾಲಕನ ಬಗ್ಗೆ ನಿರ್ಮಿಸಿರುವ ಸಾಕ್ಷ್ಯಚಿತ್ರ ಬೆಂಗಳೂರಿನ ಪ್ರೇಕ್ಷಕರ ಹೃದಯ ತಟ್ಟಿದೆ. ಸಾಕ್ಷ್ಯಚಿತ್ರ ಕೆರೆಗಳ ಮಾಲಿನ್ಯದ ವಿಷಯವನ್ನು ಹೊಂದಿದೆ. ಸಾಕ್ಷ್ಯಚಿತ್ರವನ್ನು ನಿನ್ನೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯ್ಸಸ್ ಫ್ರಮ್ ದ ವಾಟರ್ಸ್ ಇಂಟರ್ ನ್ಯಾಷನಲ್ ಟ್ರಾವಲಿಂಗ್ ಫಿಲ್ಮ್ ಫೆಸ್ಟಿವಲ್ ಆನ್ ವಾಟರ್ -2017 ನ 11ನೇ ಆವೃತ್ತಿಯಲ್ಲಿ ಪ್ರದರ್ಶನ ಮಾಡಲಾಯಿತು.
ಬಿಲಾಲ್ ಅಹ್ಮದ್ ದರ್ ಅಲಿಯಾಸ್ ಬಿಲ್ಲಾಲ್ ನ ಜೀವನದ ಬಗ್ಗೆ ಚಿತ್ರ ಹೊಂದಿದೆ. ಕಾಶ್ಮೀರದ ವಲರ್ ಕೆರೆಯನ್ನು ಪ್ಲಾಸ್ಟಿಕ್, ಕಳೆಗಳಿಂದ ರಕ್ಷಿಸಲು ಬಿಲ್ಲಾ ಹೇಗೆ ಹೋರಾಡುತ್ತಾನೆ ಎಂಬುದರ ಬಗ್ಗೆ ಕಥೆ ಹೊಂದಿದೆ. ಕೆರೆಯನ್ನು ರಕ್ಷಿಸಲು ಪ್ರಯತ್ನಿಸುವ ಬೆಂಗಳೂರಿಗರಿಗೆ ಈ ಸಾಕ್ಷ್ಯಚಿತ್ರ ಖಂಡಿತಾ ಕಣ್ಣು ತೆರೆಸಬಹುದು.
ಚಿತ್ರದಲ್ಲಿ ಬಾಲಕ 9ನೇ ವಯಸ್ಸಿನಲ್ಲಿ ತನ್ನ ತಂದೆಯನ್ನು ಕಳೆದುಕೊಳ್ಳುತ್ತಾನೆ. ಆತ ಶಿಕ್ಷಣದಲ್ಲಿ ಮುಂದಿದ್ದರೂ ಕೂಡ ಶಾಲೆಯನ್ನು ಅನಿವಾರ್ಯವಾಗಿ ಬಿಡಬೇಕಾಗುತ್ತದೆ. ಆತನಿಗೆ ತಾಯಿ ಮತ್ತು ಇಬ್ಬರು ಸೋದರಿಯರಿರುತ್ತಾರೆ. ಪ್ಲಾಸ್ಟಿಕ್ ಮತ್ತು ಕಳೆ, ಕಸ-ಕಡ್ಡಿ, ಕೊಳಕು ವಸ್ತುಗಳಿಂದ ತುಂಬಿ ಹೋಗಿರುವ ವುಲರ್ ಕೆರೆಯನ್ನು ಸ್ವಚ್ಛಗೊಳಿಸುವುದು ಬಿಲ್ಲನ ದಿನನಿತ್ಯದ ಕೆಲಸವಾಗಿರುತ್ತದೆ. ಕೆಲಸ ಮಾಡಿ ಬಂದ ಅಲ್ಪ ಹಣದಿಂದ ತನ್ನ ಸಂಸಾರವನ್ನು ನೋಡಿಕೊಳ್ಳುತ್ತಾನೆ. ಕೆರೆಯ ಪ್ಲಾಸ್ಟಿಕ್ ಮತ್ತು ಕಸಗಳನ್ನು ಸ್ವಚ್ಛಗೊಳಿಸಿ ತನ್ನ ಮನೆಯವರ ಬದುಕು ನೋಡಿಕೊಳ್ಳುವ ವಿಷಯವನ್ನು ಇಲ್ಲಿ ವ್ಯಂಗವಾಗಿ ತೋರಿಸಲಾಗಿದೆ. ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ.
ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ ನಂತರ ಮಾತನಾಡಿದ ನಿರ್ದೇಶಕ ಟಿ.ಎಸ್.ನಾಗಾಭರಣ, ಬೆಂಗಳೂರಿನ ಕೆರೆಗಳು ಇಂತಹದೇ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಚಿತ್ರ ಬಹಳ ಹತ್ತಿರವಾಗಿದೆ ಎಂದು ಭಾವಿಸುತ್ತೇನೆ. ಬೆಂಗಳೂರಿನ ಹಲವು ನಾಗರಿಕರು ಜಲಮೂಲದ ಬಗ್ಗೆ ನಿರ್ಲಕ್ಷ್ಯ ಹೊಂದಿರುತ್ತಾರೆ. ಮಣ್ಣು, ಕಸಗಳಿಂದ ತುಂಬಿದ ಸರೋವರಗಳು ಉಪೇಕ್ಷಿತವಾಗಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ಕೆಲವರಿಗೆ ಸಾಕಷ್ಟು ನೀರು ಸಿಗುವುದರಿಂದ ಈ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದರು.
ಸಾಕ್ಷ್ಯಚಿತ್ರದ ನಿರ್ದೇಶಕ ಜಲಾಲ್ ಉದ್ ದಿನ್ ಬಾಬಾ ಸಮಾರಂಭಕ್ಕೆ ಆಗಮಿಸಿರಲಿಲ್ಲ. ದೂರವಾಣಿ ಮೂಲಕ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೂಡ ಸಾಕ್ಷ್ಯಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ನನಗೆ ಸಂತೋಷವನ್ನುಂಟುಮಾಡಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ