ಗದಗ: ಸರ್ಕಾರಿ ಸೌಲಭ್ಯ ವಂಚಿತ ಕುಟುಂಬದಿಂದ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ

ಹಲವಾರು ವರ್ಷಗಳಿಂದ ಯಾವುದೇ ಸರ್ಕಾರಿ ಸೌಲಭ್ಯಗಳು ದೊರಕದ ಕಾರಣ ತನಗೆ ದಯಾಮರಣ ನೀಡಬೇಕೆಂದು ಕೋರಿ ಮುಳಗುಂದದ ವ್ಯಕ್ತಿಯೊಬ್ಬ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ......
ಹಜರೇಶ ಮಕಂದರ್
ಹಜರೇಶ ಮಕಂದರ್
ಗದಗ: ಹಲವಾರು ವರ್ಷಗಳಿಂದ ಯಾವುದೇ ಸರ್ಕಾರಿ ಸೌಲಭ್ಯಗಳು ದೊರಕದ ಕಾರಣ ತನಗೆ ದಯಾಮರಣ ನೀಡಬೇಕೆಂದು ಕೋರಿ ಮುಳಗುಂದದ ವ್ಯಕ್ತಿಯೊಬ್ಬ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಹಜರೇಶ ಮಕಂದರ್ ಅವರು ಸರ್ಕಾರದ ಗೃಹ ನಿರ್ಮಾಣ ಯೋಜನೆಯಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ಪಟ್ಟಣ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದು ಇದು ವ್ಯರ್ಥವಾಗಿತ್ತು. ತನಗೆ ಅನಾರೋಗ್ಯದ ಕಾರಣ ಜೀವನಕ್ಕಾಗಿ ಹೊರ ಹೋಗಿ ದುಡಿಯಲು ಸಾದ್ಯವಾಗುತ್ತಿಲ್ಲ. ಆದರೆ ಸರ್ಕಾರ ಯಾವುದೇ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಅವರು ಹೇಳಿದರು. 
ಇವರಿಗೆ ಆಸ್ಮಾ ಬೇಗಂ ಎನ್ನುವ ಪತ್ನಿ ಮತ್ತು ಓರ್ವ ಮಗ ಹಾಗೂ ಒಬ್ಬ ಪುತ್ರಿ ಇದ್ದಾರೆ. ಇವರು ಟ್ರ್ಯಾಕ್ಟ್ರ್ ಚಾಲಕರಾಗಿದ್ದು 2006ರಲ್ಲಿ ಟ್ರ್ಯಾಕ್ಟರ್ ನ ಟ್ರಾಲಿ ಕಾಲಿನ ಮೇಲೆ ಹರಿದ ಪರಿಣಾಮ ತಮ್ಮ ಕಾಲುಗಳನ್ನು ಕಳೆದುಕೊಂಡಿದ್ದರು. ಅವರು ಮುಳಗುಂದದ ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಎತ್ತಿ ಜೀವನ ಸಾಗಿಸುತ್ತಿದ್ದಾರೆ.
"ನಾನು ಮನೆಗಾಗಿ ಗದಗದ ಉಪ ಆಯುಕ್ತರಿಗೆ ಸಹ ಮನವಿ ಮಾಡಿದೆ. ಆದರೆ ಏನೂ ಪ್ರಯೋಜನವಾಗಿಲ್ಲ. ಈಗ ನನ್ನ ಹೆಂಡತಿ ಅನಾರೋಗ್ಯ ಪೀಡಿತಳಾಗಿದ್ದಾಳೆ, ಆಕೆಯ ವೈದ್ಯಕೀಯ ವೆಚ್ಚವನ್ನು ಭರಿಸುವುದು ನನ್ನಿಂದ ಆಗುತ್ತಿಲ್ಲ. ನನಗೆ ಮಗ ಮತ್ತು ಮಗಳು ಇದ್ದು . ನಾನು ಅವರನ್ನೆಲ್ಲಾ ಸಾಕಬೇಕಿದೆ. ಹೀಗಾಗಿ ಕಡೆಯ ಪ್ರಯತ್ನವೆನ್ನುವಂತೆ , ನಾನು ರಾಷ್ಟ್ರಪತಿಗಳಿಗೆ ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ್ದೇನೆ." ಮಕಂದರ್ ಹೇಳಿದರು.
"ಮಕಂದರ್ ಕಳೆದ 10 ವರ್ಷಗಳಿಂದ ಸ್ವಂತ ಮನೆಯನ್ನು ಹೊಂದಲು ಪ್ರಯತ್ನಿಸುತ್ತಿದ್ದಾರೆ ಆದರೆ ಸರ್ಕಾರಿ ಅಧಿಕಾರಿಗಳು ಮಾತ್ರ ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ. ನಾನು ಅಧಿಕಾರಿಗಳಿಗೆ ವಿನಂತಿಸಿಕೊಳ್ಳುತ್ತೇನೆ, ಮಕಂದರ್  ಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಕಲ್ಪಿಸಿ ಕೊಡಿ. ಹಾಗಾಗದೆ ಹೋದಲ್ಲಿ ಆತ ಮತ್ತು ಆತನ ಕುಟುಂಬ ತೆಗೆದುಕೊಳ್ಳುವ ದಾರುಣ ನಿರ್ಧಾರಕ್ಕೆ ನಾವೆಲ್ಲ ಹೊಣೆಗಾರರಾಗುತ್ತೇವೆ" ಎಂದು ಮುಳಗುಂದದ ಸಾಮಾಜಿಕ ಕಾರ್ಯಕರ್ತ ಮಹಾಂತೇಶ್ ಕಣವಿ ಹೇಳಿದರು.
"ನಾವು ಮಕಂದರ್ ಅವರ ಅರ್ಜಿಯನ್ನು ಜಿಲ್ಲಾಧಿಕಾರಿಗೆ ಕಳಿಸಿದ್ದೇವೆ.  ಅವರೂ ಸಹ ತಮ್ಮ ಕೆಳಗಿನ ಅಧಿಕಾರಿಗಳಿಗೆ ಆತನಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ಸಲಹೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಮನೆಗಳ ಹಂಚಿಕೆ ಪ್ರಾರಂಭಿಸಿದಾಗ ಮಕಂದರ್ ಅವರ ಅರ್ಜಿಯನ್ನು ಮೊದಲು ಪರಿಗಣಿಸುತ್ತೇವೆ." ಮುಳಗುಂದ ಪಟ್ಟಣ ಪಂಚಾಯತ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com