ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ಕಲ್ಪಿಸುವ 'ಬೆಂಗಳೂರು ಲಾಂಛನ' ಬಿಡುಗಡೆ

ರಾಜ್ಯ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡಲು ಮತ್ತು ಇನ್ನಷ್ಟು ಅಭಿವೃದ್ಧಿಪಡಿಸಲು ....
ನಿನ್ನೆ ವಿಧಾನಸೌಧದ ಮುಂಭಾಗ ಬೆಂಗಳೂರು ಲಾಂಛನ ಬಿಡುಗಡೆ ಮಾಡಿದ ಸಚಿವರು
ನಿನ್ನೆ ವಿಧಾನಸೌಧದ ಮುಂಭಾಗ ಬೆಂಗಳೂರು ಲಾಂಛನ ಬಿಡುಗಡೆ ಮಾಡಿದ ಸಚಿವರು
ಬೆಂಗಳೂರು: ರಾಜ್ಯ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡಲು ಮತ್ತು ಇನ್ನಷ್ಟು ಅಭಿವೃದ್ಧಿಪಡಿಸಲು ಮೊದಲ ಪ್ರಯತ್ನವಾಗಿ ಬೆಂಗಳೂರು ಲಾಂಛನವನ್ನು ನಿನ್ನೆ ಅನಾವರಣಗೊಳಿಸಲಾಯಿತು. ಬ್ರಾಂಡ್ ಬೆಂಗಳೂರಿನ ಭಾಗ ಇದಾಗಿದೆ. 
ನ್ಯೂಯಾರ್ಕ್, ಲಂಡನ್, ಮೆಲ್ಬರ್ನ್ ನಗರಗಳ ಮಾದರಿಯಲ್ಲಿ ಭಾರತ ದೇಶದಲ್ಲಿ ಇದೇ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಲಾಂಛನವನ್ನು ಬಿಡುಗಡೆ ಮಾಡಿದೆ.ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಪೂರ್ವ ದ್ವಾರದ ಮುಂಭಾಗದ ಮೆಟ್ಟಿಲುಗಳ ಮೇಲೆ ನಮ್ಮ ಬೆಂಗಳೂರು ಹಬ್ಬದ ಅದ್ದೂರಿ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಲಾಂಛನ ಬಿಡುಗಡೆ ಮಾಡಿದರು. ಈ ಅಪರೂಪದ ಕ್ಷಣಕ್ಕೆ ಸಾವಿರಾರು ಜನರು ಸಾಕ್ಷಿಯಾದರು. 
ಈ ಸಂದರ್ಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರು ಬ್ರಾಂಡ್ ನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಲಾಂಛನ ಬಿಡುಗಡೆ ಮಾಡಲಾಗಿದೆ. ಈ ಲಾಂಛನದಡಿಯಲ್ಲಿ ಬೆಂಗಳೂರಿನ ಸಂಸ್ಕೃತಿ, ಕಲೆ, ಸಾಹಿತ್ಯ, ಪರಿಸರ, ಪರಂಪರೆ, ಇತಿಹಾಸವನ್ನು ಸಾರಲಿದೆ. ಲಾಂಛನವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬೆಂಗಳೂರು ಬ್ರ್ಯಾಂಡ್ ಮೂಲಕ ಪ್ರವಾಸೋದ್ಯಮ ವಿಸ್ತರಣೆಗೆ ಅನುಕೂಲವಾಗಲಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರನ್ನು ಮತ್ತಷ್ಟು ಪರಿಚಯಿಸಲು ಇದು ಸಹಾಯವಾಗಲಿದೆ. ನಗರದಲ್ಲಿ ಉಚಿತ ವೈಫೈ ನೀಡಲು 6 ಸಾವಿರ ಜಾಗಗಳನ್ನು ಗುರುತಿಸಲಾಗಿದ್ದು ಬರುವ ಜನವರಿ 15ಕ್ಕೆ 300 ಜಾಗಗಳಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಲಾಂಛನ ರಚಿಸಿದ ನಮ್ಮೂರು ಎಂಬ ಸ್ಟಾರ್ಟ್ ಅಪ್ ಸಂಸ್ಥೆಗೆ ರಾಜ್ಯ ಸರ್ಕಾರ ವತಿಯಿಂದ 5 ಲಕ್ಷ ರೂಪಾಯಿ ಬಹುಮಾನ ನೀಡಿ ಗೌರವಿಸಲಾಯಿತು. 
ಲಾಂಛನ ಉದ್ಘಾಟನೆ ಕಾರ್ಯಕ್ರಮ ವೇದಿಕೆಯಲ್ಲಿ ರೋಬೋಟ್ ಎಲ್ಲರ ಆಕರ್ಷಣೆಗೆ ಪಾತ್ರವಾಯಿತು. ರೋಬೋಟನ್ನು ನಿರೂಪಕಿ ಮಾತನಾಡಿಸಿ ಗಮನ ಸೆಳೆದರು. ಇಲ್ಲೇನೋ ವಿಶೇಷ ನಡೆಯುತ್ತಿದೆಯಲ್ಲಾ ಎಂದು ರೋಬೋಟ್ ಹೇಳಿದಾಗ ಜನರು ಚಪ್ಪಾಳೆಯಿಂದ ಸಂತೋಷ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com