ವೈದ್ಯರು ಮಾನಸಿಕ ರೋಗಿಗಳ ಚಿಕಿತ್ಸೆಯಲ್ಲಿ ಹೆಚ್ಚು ಶ್ರಮವಹಿಸುವ ಅಗತ್ಯವಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್

ವೈದ್ಯರು ಮಾನಸಿಕ ರೋಗಿಗಳ ಚಿಕಿತ್ಸೆಯಲ್ಲಿ ಹೆಚ್ಚು ಶ್ರಮವಹಿಸುವ ಅಗತ್ಯವಿದೆ, ನಿಮ್ಹಾನ್ಸ್ ನಡೆಸಿದ ....
ಬೆಂಗಳೂರಿನ ನಿಮ್ಹಾನ್ಸ್ ನ  22ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಹಾಗೂ ಪ್ರತಿಭಾನ್ವಿತರಿಗೆ ಪದಕಗಳನ್ನು ಪ್ರದಾನ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್. ರ
ಬೆಂಗಳೂರಿನ ನಿಮ್ಹಾನ್ಸ್ ನ 22ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಹಾಗೂ ಪ್ರತಿಭಾನ್ವಿತರಿಗೆ ಪದಕಗಳನ್ನು ಪ್ರದಾನ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್. ರ
ಬೆಂಗಳೂರು: ವೈದ್ಯರು ಮಾನಸಿಕ ರೋಗಿಗಳ ಚಿಕಿತ್ಸೆಯಲ್ಲಿ ಹೆಚ್ಚು ಶ್ರಮವಹಿಸುವ ಅಗತ್ಯವಿದೆ, ನಿಮ್ಹಾನ್ಸ್ ನಡೆಸಿದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ ವರದಿಯಲ್ಲಿ, ಬದುಕಿನ ಒತ್ತಡದಿಂದ ಮಾನಸಿಕ ರೋಗಿಗಳ ಸಂಖ್ಯೆ ದೇಶದಲ್ಲಿ ಹೆಚ್ಚಳವಾಗುತ್ತಿರುವ ಅಂಶ ವ್ಯಕ್ತಪಡಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಅವರು ನಿನ್ನೆ ಬೆಂಗಳೂರಿನ ರಾಷ್ಟ್ರೀಯ ನರರೋಗ ವಿಜ್ಞಾನಗಳ ಸಂಸ್ಥೆ-ನಿಮ್ಹಾನ್ಸ್ ನ  22ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಹಾಗೂ ಪ್ರತಿಭಾನ್ವಿತರಿಗೆ ಪದಕಗಳನ್ನು ಪ್ರದಾನ ಮಾಡಿ ಮಾತನಾಡಿದರು.
ಮಾನಸಿಕ ಕಾಯಿಲೆಗೆ ಸಾಂಪ್ರದಾಯಿಕ ಯೋಗ ಹಾಗೂ ವೈದ್ಯಕೀಯ ಚಿಕಿತ್ಸಾ ವಿಧಾನಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಸುಧಾರಣೆ ತರುವ ಅಗತ್ಯವಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ವಿದೇಶಿಯರು ಸೇರಿದಂತೆ ಸುಮಾರು 7 ಲಕ್ಷ ಮಾನಸಿಕ ರೋಗಿಗಳಿಗೆ ನಿಮ್ಹಾನ್ಸ್ ಚಿಕಿತ್ಸೆ ನೀಡಿರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದು ರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶ 2022ರ ವೇಳೆಗೆ 75ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳಲಿದ್ದು, ಈ ವೇಳೆಗೆ ರಾಷ್ಟ್ರದಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಅತ್ಯಂತ ಕಡಿಮೆ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಮಾನಸಿಕ ಆರೋಗ್ಯ ಕ್ಷೇತ್ರದ್ದಾಗಿರುತ್ತದೆ ಎಂದರು.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಾತನಾಡಿ, 2014ರ ಅಕ್ಟೋಬರ್‍ನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ನೀತಿ ಜಾರಿಗೆ ತರಲಾಗಿದೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ಗುರಿ ಸಾಧನೆಗೆ ಮಾನಸಿಕ ಆರೋಗ್ಯ ತಜ್ಞರು, ಚಿಕಿತ್ಸಾ ಪರಿಣಿತರು, ಶುಶ್ರೂಷಕರು ಹಾಗೂ ಮಾನಸಿಕ ಸಾಮಾಜಿಕ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಹೆಚ್ಚಳ ಮೂಲಕ ವೈದ್ಯಕೀಯ ಚಿಕಿತ್ಸೆ ಹಾಗೂ ಪೂರಕ ಸೇವೆಗಳ ಪ್ರಮಾಣ
ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ಬೆಂಗಳೂರು ಮಾತ್ರವಲ್ಲದೆ, ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ, ಬೆಂಗಳೂರು ಉತ್ತರ ಭಾಗದಲ್ಲಿ ಸಮಗ್ರ ಆಘಾತ ಘಟಕ ಹಾಗೂ ನಗರ ಮಾನಸಿಕ ಆರೋಗ್ಯ ಮಾದರಿ ಸಂಸ್ಥೆ ಸ್ಥಾಪನೆಗೆ ನಿಮ್ಹಾನ್ಸ್ ಗೆ 40 ಎಕರೆ ಭೂಮಿ ನೀಡಿದೆ, ರಾಜ್ಯದಲ್ಲಿನ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ನಿಗಾ
ಹಾಗೂ ತಂತ್ರಜ್ಞಾನ ಉಸ್ತುವಾರಿಗೆ ನಿಮ್ಹಾನ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ನಂತರ ಅದಮ್ಯ ಚೇತನ ಸಂಸ್ಥೆಯ ಸೇವಾ ಉತ್ಸವ ಹಾಗೂ ಕರ್ನಾಟಕ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ರಾಷ್ಟ್ರಪತಿ, ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಮರ್ಥ್ಯ ಹೊಂದಿರುವ ಮಕ್ಕಳನ್ನು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪರಿಸರ ರಕ್ಷಣೆ ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯವಾಗಿದ್ದು ಅದನ್ನು ನಾವು ಕೆಲವೊಮ್ಮೆ ಮರೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. 
ಪ್ರಕೃತಿ ನಮಗೆ ದೇವರು ನೀಡಿರುವ ವರ. ಭಾರತೀಯರು ನದಿ, ಮರ, ಅರಣ್ಯಗಳನ್ನು ದೇವರಂತೆ ಪೂಜಿಸುತ್ತೇವೆ. ಅವುಗಳನ್ನು ಮರುಬಳಕೆ ಮಾಡುತ್ತೇವೆ. ಅದು ನಮ್ಮ ಸಂಪ್ರದಾಯ. ಕೆಲವೊಮ್ಮೆ ಆಧುನಿಕ ಜೀವನಶೈಲಿಯಲ್ಲಿ ಇವನ್ನೆಲ್ಲಾ ಮರೆಯುತ್ತೇವೆ. ಆದರೆ ಅವುಗಳನ್ನು ನೆನಪಿನಲ್ಲಿಟ್ಟುಕೊಂಡು ಮುಂದಿನ ತಲೆಮಾರಿಗೆ ವರ್ಗಾಯಿಸುವುದು ಇಂದಿನ ಜನಾಂಗದ ಕರ್ತವ್ಯವಾಗಿದೆ ಎಂದು ಒತ್ತಿ ಹೇಳಿದರು.
ಬಸವನಗುಡಿ ನ್ಯಾಶನಲ್ ಹೈಸ್ಕೂಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಗುರು ದಿವಂಗತ ಎಚ್.ನರಸಿಂಹಯ್ಯ ಅವರಿಗೆ ಗೌರವ ಸಲ್ಲಿಸಿದರು. ಇಂದಿನ ವಿದ್ಯಾರ್ಥಿಗಳಿಗೆ 
ನರಸಿಂಹಯ್ಯ ಅವರು ಮಾದರಿ ಎಂದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಮಾತನಾಡಿ, ಅದಮ್ಯ ಚೇತನ ಸಂಸ್ಥೆಯಿಂದ ಬೆಂಗಳೂರಿನಲ್ಲಿ ಒಂದು ಕೋಟಿ ಗಿಡ ನೆಡುವ ಗುರಿ ಇದ್ದು, ಪ್ರತಿ ಭಾನುವಾರ ಹಸಿರು ಭಾನುವಾರ ಕಾರ್ಯಕ್ರಮದ ಅಂಗವಾಗಿ ನಾಳೆ ಯಿಂದ ಪರಿಸರ ಸಂರಕ್ಷಣೆ ಸಲುವಾಗಿ ಪ್ರತಿ ಭಾನುವಾರ ಸೈಕಲ್ ಭಾನುವಾರವಾಗಿ ಆಚರಿಸಲಾಗುವುದು ಎಂದು ಹೇಳಿದರು.
ರಾಮನಗರ ಸಮೀಪದ ಬಿಡದಿಯ ತಿಮ್ಮೇಗೌಡನದೊಡ್ಡಿ ಬಳಿ ಅಮೃತ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‍ಮೆಂಟ್ ಸೈನ್ಸ್ ಕ್ಯಾಂಪಸ್ ಕಟ್ಟಡ ಉದ್ಘಾಟನೆ ಮತ್ತು ವೀರಶೈವ ವಿದ್ಯಾವರ್ಧಕ ಸಂಘದ 111ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ರಾಷ್ಟ್ರಪತಿ ಅವರು, ತಾಂತ್ರಿಕ ಶಿಕ್ಷಣ ಪದವೀಧರರು ಉದ್ಯೋಗ ಅರಸದೆ, ಉದ್ಯೋಗ ಸೃಷ್ಠಿಯ ಶಕ್ತಿಯಾಗಬೇಕು, ಕ್ರಾಂತಿಕಾರಿ ಬಸವೇಶ್ವರರ ವಿಚಾರಧಾರೆ ಇಂದಿಗೂ ಯುವ
ಸಮುದಾಯಕ್ಕೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ, ಕೇಂದ್ರ ಸಚಿವ ಅನಂತಕುಮಾರ್ ಉಪಸ್ಥಿತರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com