ಜರ್ಮನ್ ಮಹಿಳೆಗೆ ಸಹಾಯ ಮಾಡಿದ ಹುಬ್ಬಳ್ಳಿ ಪೊಲೀಸರು

ದೆಹಲಿಗೆ ತೆರಳುವ ರೈಲು ತಪ್ಪಿಹೋಗಿ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡ ಜರ್ಮನ್ ದೇಶದ ಮಹಿಳೆಗೆ...
ಹುಬ್ಬಳ್ಳಿ  ರೈಲು ನಿಲ್ದಾಣ, ಒಳ ಚಿತ್ರದಲ್ಲಿ ಗಬಿ ವಾರ್ನರ್
ಹುಬ್ಬಳ್ಳಿ ರೈಲು ನಿಲ್ದಾಣ, ಒಳ ಚಿತ್ರದಲ್ಲಿ ಗಬಿ ವಾರ್ನರ್
ಹುಬ್ಬಳ್ಳಿ: ದೆಹಲಿಗೆ ತೆರಳುವ ರೈಲು ತಪ್ಪಿಹೋಗಿ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡ ಜರ್ಮನ್ ದೇಶದ ಮಹಿಳೆಗೆ ಹುಬ್ಬಳ್ಳಿ ಉಪ ನಗರ ಪೊಲೀಸರು ಸಹಾಯ ಮಾಡಿದ್ದಾರೆ.
ಇದು ನಡೆದಿದ್ದು ಮೊನ್ನೆ ಮಂಗಳವಾರ, ಗಬಿ ವಾರ್ನರ್ ಮೊನ್ನೆ ಮಂಗಳವಾರ ಅಪರಾಹ್ನ ಹುಬ್ಬಳ್ಳಿಯಿಂದ ದೆಹಲಿಗೆ ಹೋಗುವ ರೈಲು ಹತ್ತಬೇಕಾಗಿತ್ತು. ಆದರೆ ಸ್ಟೇಷನ್ ಗೆ ಅವರು ಬರುವ ಹೊತ್ತಿಗೆ ರೈಲು ಹೊರಟು ಹೋಗಿತ್ತು.
ಬೇರೆ ಟಿಕೆಟ್ ತೆಗೆದುಕೊಂಡು ರೈಲು ಹತ್ತಲು ಅವರ ಬಳಿ ಹಣ ಇರಲಿಲ್ಲ. ಕ್ರೆಡಿಟ್ ಕಾರ್ಡಿನಲ್ಲಿ ಹಣ ತೆಗೆಯಲು ಸಾಧ್ಯವಾಗಲಿಲ್ಲ. ತಮ್ಮ ಮೊಬೈಲಿನ ಬ್ಯಾಟರಿ ಕೂಡ ಕಡಿಮೆಯಾಗುತ್ತಾ ಬಂದಿತ್ತು. ಆಗ ಪೊಲೀಸರ ಬಳಿ ನೆರವಿಗೆ ಹೋದರು. ರೈಲ್ವೆ ಸ್ಟೇಷನ್ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಪೊಲೀಸ್ ಇನ್ಸ್ ಪೆಕ್ಟರ್ ಮುತ್ತಣ್ಣ ಮತ್ತು ಅವರ ಕಚೇರಿ ಸಿಬ್ಬಂದಿ ಆಕೆಗೆ ಅಗತ್ಯ ನೆರವು ನೀಡಿದರು. ಅದೇ ದಿನ ಸಂಜೆ ರೈಲಿಗೆ ದೆಹಲಿಗೆ ತೆರಳಲು ಟಿಕೆಟ್ ಕೊಡಿಸಿದರು.
ವಿದೇಶಿ ಪ್ರಜೆಯೆಂದು ತಾರತಮ್ಯ ಮಾಡದೆ ಮಧ್ಯಾಹ್ನ ಊಟ ಮತ್ತು ನೀರು ಕೊಡಿಸಿದರು. 2,000 ರೂಪಾಯಿ ಟಿಕೆಟ್ ಗೆ ಹಣ ಮತ್ತು ಗಬಿಯ ಖರ್ಚಿಗೆಂದು ಒಂದಷ್ಟು ಹಣ ಕೊಟ್ಟರು. ರಾತ್ರಿ 9.50ರ ರೈಲಿಗೆ ತೆರಳಲು ರೈಲ್ವೆ ಸ್ಟೇಷನ್ ಗೆ ಕಳುಹಿಸಿಕೊಟ್ಟರು.
ಮಂಗಳವಾರ ದಾವಣಗೆರೆಯಿಂದ ಹುಬ್ಬಳ್ಳಿಗೆ ಬಸ್ಸಿನಲ್ಲಿ ಬಂದಿದ್ದ ಗಬಿ ರೈಲು ಹೊರಡುವ ಸಮಯವನ್ನು ತಪ್ಪಾಗಿ ಲೆಕ್ಕ ಹಾಕಿಕೊಂಡಿದ್ದರು. ಪೊಲೀಸರಿಗೆ ಧನ್ಯವಾದ ಹೇಳಿದ ಗಬಿ ವಾರ್ನರ್ ನೆನಪುಗಳೊಂದಿಗೆ ಹುಬ್ಬಳ್ಳಿಯಿಂದ ರೈಲು ಹತ್ತಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com