ಬೆಂಗಳೂರು: ಹೊಸಕೆರೆ ಹಳ್ಳಿಯಲ್ಲಿ ಪತ್ತೆಯಾಗಿದ್ದು ಕ್ರಿ.ಶ.1000ರ ಚೋಳರ ಕಾಲದ ತೂಬು

ಒಂದು ತಿಂಗಳ ಹಿಂದೆ ಹೊಸಕೆರೆ ಹಳ್ಳಿ ಕೆರೆಯಲ್ಲಿ ಹೂಳು ತೆಗೆಯುವಾಗ ದೊರೆತ ಮಂಟಪ ಚೋಳರ ಕಾಲದಲ್ಲಿ ಕೆರೆಗೆ ನಿರ್ಮಿಸಿದ ತೂಬು ಎಂದು ಗೊತ್ತಾಗಿದೆ...
ಹೊಸಕೆರೆಹಳ್ಳಿಯಲ್ಲಿ ಪತ್ತೆಯಾಗಿರುವ ಮಂಟಪ
ಹೊಸಕೆರೆಹಳ್ಳಿಯಲ್ಲಿ ಪತ್ತೆಯಾಗಿರುವ ಮಂಟಪ

ಬೆಂಗಳೂರು: ಒಂದು ತಿಂಗಳ ಹಿಂದೆ ಹೊಸಕೆರೆ ಹಳ್ಳಿ ಕೆರೆಯಲ್ಲಿ ಹೂಳು ತೆಗೆಯುವಾಗ ದೊರೆತ ಮಂಟಪ ಚೋಳರ ಕಾಲದಲ್ಲಿ ಕೆರೆಗೆ ನಿರ್ಮಿಸಿದ ತೂಬು ಎಂದು ಗೊತ್ತಾಗಿದೆ. ಇದು ಕ್ರಿ.ಶ 1000 ವರ್ಷದ ತೂಬುಗೇಟು ಎಂದು ತಿಳಿದು ಬಂದಿದೆ.

ಕಳೆದ ತಿಂಗಳು ಕೆರೆ ಕೋಡಿ ಸಮೀಪ ಸುಮಾರು 25 ಅಡಿ ಆಳದಲ್ಲಿ ದೊರೆತ ಈ ಕಲ್ಲಿನ ಮಂಟಪ ಕೆಂಪೇಗೌಡರ ಕಾಲದಲ್ಲಿ ಬಾಗಿನ ಅರ್ಪಿಸಲು ಬಳಸುತ್ತಿದ್ದ ಗಂಗಮ್ಮನ ತೊಟ್ಟಿಲು ಎಂಬ ಊಹಾಪೋಹ ಹುಟ್ಟಿಕೊಂಡಿತ್ತು.

ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ಪುರಾತತ್ವ ಇಲಾಖೆ ಅಧಿಕಾರಿಗಳು ಅದು ಚೋಳರ ಕಾಲದ ಮಂಟಪ ಎಂದಿದ್ದರು. ಈಗ ಸಮಗ್ರ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಅದು ಮಂಟಪವಲ್ಲ, ಕೆರೆಗೆ ನಿರ್ಮಿಸಿರುವ ತೂಬು ಎಂದು ಸ್ಪಷ್ಟಪಡಿಸಿದ್ದಾರೆ.

ಮಂಟಪದಲ್ಲಿನ ಕೆತ್ತನೆಯನ್ನು ನೋಡಿ ಚೋಳರ ಕಾಲದ ಮಂಟಪ ಎಂದಷ್ಟೆ ತಿಳಿದು ಬಂದಿತ್ತು. ಆಗ ಕೆರೆಯಲ್ಲಿ ನೀರು ಇದ್ದಿದ್ದರಿಂದ ಪೂರ್ಣ ಪರಿಶೀಲನೆ ಸಾಧ್ಯವಾಗಿರಲಿಲ್ಲ. ಹೂಳು ತೆಗೆಯುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಇದು ಚೋಳರ ಕಾಲದ್ದು ಎಂದು ಪುರಾತತ್ವ ಇಲಾಖೆ ನಿರ್ದೇಶಕ ಡಾ. ಆರ್ ಗೋಪಾಲ್ ಹೇಳಿದ್ದಾರೆ.

ಕೃಷಿಗಾಗಿ ಕಾಲುವೆಗಳ ಮೂಲಕ ನೀರು ಬಿಡಲು ಗೇಟುಗಳನ್ನು ಅಳವಡಿಸಲು ಅಗತ್ಯವಿರುವ ಎರಡು ದೊಡ್ಡ ರಂಧ್ರಗಳು ಈ ಮಂಟಪದಲ್ಲಿವೆ. ಸಾಮಾನ್ಯವಾಗಿ ಮಂಟಪ, ದೇವಸ್ಥಾನಗಳಿಗೆ ಈ ರೀತಿಯ ರಂಧ್ರ ಮಾಡುವುದಿಲ್ಲ. ಹಾಗಾಗಿ ಪತ್ತೆಯಾಗಿರುವುದು ಗುಡಿಯ ಮಂಟಪವಲ್ಲ ತೂಬು ಎಂಬುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

15  ಅಡಿ ಅಗಲ 10 ಅಡಿ ಎತ್ತರದ ಈ ಕಲ್ಲಿನ ತೂಬು ಇದಾಗಿದೆ.  ಮಂಟಪದಲ್ಲಿ ನಾಲ್ಕು ಕಲ್ಲಿನ ಕಂಬಗಳಿದ್ದು, ಕಲ್ಲಿನಿಂದಲೇ ಮಾಡಿದ ಮೇಲ್ಚಾವಣಿ ಇದೆ. 56 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಸುಮಾರು ವರ್ಷಗಳಿಂದ ಹೂಳು ತೆಗೆದಿರಲಿಲ್ಲ. ಏಳು ತಿಂಗಳಿಂದ ಈ ಕೆರೆಯ ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ.  ಅದರಲ್ಲಿ 6 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com