ಕೇಂದ್ರ ನೀಡುವ ಬೆಳೆ ಪರಿಹಾರ ಧನಕ್ಕಾಗಿ ಇನ್ನೂ ಕಾಯುತ್ತಿರುವ ರಾಜ್ಯ ಸರ್ಕಾರ

ಕೇಂದ್ರ ಸರ್ಕಾರ ನೀಡಿದ್ದ 450 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಈ ವರೆಗೂ ಖರ್ಚು ಮಾಡಿಲ್ಲ. ಆದರೆ ಕೇಂದ್ರದಿಂದ ಬರಬೇಕಿರುವ ಬಾಕಿ ಮೊತ್ತವನ್ನು ಎದುರು ನೋಡುತ್ತಿದೆ.
ಬೆಳೆ ಪರಿಹಾರ ಧನ
ಬೆಳೆ ಪರಿಹಾರ ಧನ
ಬೆಂಗಳೂರು: 2016 ನೇ ಸಾಲಿನ ಮುಂಗಾರು ಫಸಲು ನಷ್ಟಕ್ಕೆ ಪರಿಹಾರವಾಗಿ ನೀಡುವುದಕ್ಕೆ ಕೇಂದ್ರ ಸರ್ಕಾರ ನೀಡಿದ್ದ 450 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಈ ವರೆಗೂ ಖರ್ಚು ಮಾಡಿಲ್ಲ. ಆದರೆ ಕೇಂದ್ರದಿಂದ ಬರಬೇಕಿರುವ ಬಾಕಿ ಮೊತ್ತವನ್ನು ಎದುರು ನೋಡುತ್ತಿದೆ. 
ಈ ಬಗ್ಗೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದು, ಬಾಕಿ ಇರುವ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ. ಒಟ್ಟು 1,682 ಕೋಟಿ ರೂಪಾಯಿ ಪೈಕಿ  ಕೇಂದ್ರ ಸರ್ಕಾರ ನೀಡಿರುವ 450 ಕೋಟಿ ರೂಪಾಯಿಯನ್ನು ಪರಿಹಾರ ಧನವಾಗಿ ಈಗಲೇ ವಿತರಿಸಿದರೆ ಪರಿಹಾರ ಸಿಗದೇ ಇರುವವರು ಅಸಮಾಧಾನಗೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಾಕಿ ನೀಡಬೇಕಿರುವ ಹಣವನ್ನು  ನೀಡಿದರೆ ಶೀಘ್ರವೇ ಎಲ್ಲ ಫಲಾನುಭವಿಗಳಿಗೂ ಪರಿಹಾರ ಧನ ನೀಡಬಹುದೆಂಬುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದಾರೆ. 
ಮಾರ್ಚ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರ ನೀಡಬೇಕಿರುವ ಬಾಕಿ ಹಣ ಬಿಡುಗಡೆಯಾಗಲಿದೆ. ಕೇಂದ್ರ ಸರ್ಕಾರ ಬೇರೆ ನಿಧಿಗಳಿಂದ ಬಿಡುಗಡೆ ಮಾಡಲು ಸಾಧ್ಯವಾಗದೇ ಇದ್ದರೂ ಸಹ ಸಂಸತ್ ನ ಪೂರಕ ಅಂದಾಜುಗಳಿಂದ ಹಣವನ್ನು ಬಿಡುಗಡೆ ಮಾಡಲಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. 
ತೀವ್ರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಮೇವು ಹಾಗೂ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ಸರ್ಕಾರಕ್ಕೆ 1,000 ರೂಪಾಯಿ ಖರ್ಚಾಗಲಿದೆ. ಮಾರ್ಚ್ ನಿಂದ ಮೇ ತಿಂಗಳ ವರೆಗೆ ಮೇವು ಹಾಗೂ ಕುಡಿಯುವ ನೀರಿಗಾಗಿ ಖರ್ಚಾಗುವ ಮೊತ್ತವನ್ನು 300 ಕೋಟಿ ರೂಪಾಯಿಗಳಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com