ಕಾಂಗ್ರೆಸ್ ಹೈಕಮಾಂಡ್ ಗೆ 1000 ಕೋಟಿ ರೂ ಕಪ್ಪ: ಡೈರಿಯಲ್ಲಿರುವ ರಹಸ್ಯ ಬಹಿರಂಗ!

ರಾಜ್ಯ ಕಾಂಗ್ರೆಸ್ ಎಐಸಿಸಿಗೆ ಕಪ್ಪ ಕಾಣಿಕೆಯಾಗಿ 1000 ಕೋಟಿ ರೂಪಾಯಿ ನೀಡಿರುವ ಅಂಶ ನಮೂದಾಗಿರುವ ಕಾಂಗ್ರೆಸ್ ಮುಖಂಡರೊಬ್ಬರ ಡೈರಿಯ ರಹಸ್ಯ ಕೊನೆಗೂ ಬಹಿರಂಗವಾಗಿದೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಎಐಸಿಸಿಗೆ ಕಪ್ಪ ಕಾಣಿಕೆಯಾಗಿ 1000 ಕೋಟಿ ರೂಪಾಯಿ ನೀಡಿರುವ ಅಂಶ ನಮೂದಾಗಿರುವ ಕಾಂಗ್ರೆಸ್ ಮುಖಂಡರೊಬ್ಬರ ಡೈರಿಯ ರಹಸ್ಯ ಕೊನೆಗೂ ಬಹಿರಂಗವಾಗಿದೆ. 
ಡೈರಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಸಂಬಂಧ ಕಲ್ಪಿಸುವ ರೀತಿಯಲ್ಲಿ ಹಲವು ಸಂಕೇತಾಕ್ಷರಗಳಿದ್ದು (ಇನಿಶಿಯಲ್) ಗಳಿದ್ದು, ಕಾಂಗ್ರೆಸ್ ಗೆ ತೀವ್ರ ಮುಜುಗರ ಉಂಟಾಗಿದೆ. ಡೈರಿಯ ಪುಟಗಳು ಬಹಿರಂಗವಾಗಿರುವುದರಿಂದ ಕಪ್ಪ ಕಾಣಿಕೆ ವಿಷಯ ನಮೂದಿಸಲಾಗಿದೆ ಎಂಬ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆರೋಪಕ್ಕೆ ಮತ್ತಷ್ಟು ಪುಷ್ಟಿ ದೊರೆತಂತಾಗಿದೆ. 
ಐಟಿ ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ ಎನ್ನಲಾದ ಕಾಂಗ್ರೆಸ್ ಎಂಎಲ್ ಸಿ ಗೋವಿಂದ ರಾಜು ಅವರಿಗೆ ಸೇರಿದ ಡೈರಿಯಲ್ಲಿ ಹಣ ಕೊಟ್ಟಿರುವ ವಿವರದೊಂದಿಗೆ ಕಾಂಗ್ರೆಸ್ ನಾಯಕರ ಹೆಸರುಗಳನ್ನೇ ಹೋಲುವ ಆರ್ ಜಿ ಕಚೇರಿ-ರಾಹುಲ್ ಗಾಂಧಿ ಕಚೇರಿ, ಡಿ.ಕೆಎಸ್- ಡಿಕೆ ಶಿವಕುಮಾರ್, ಡಿವಿಜಿಎಸ್- ದಿಗ್ವಿಜಯ್ ಸಿಂಗ್, ಎಂ ವೋರಾ- ಮೋತಿ ಲಾಲ್ ವೋರಾ, ಆರ್ ವಿಡಿ-ಆರ್ ವಿ ದೇಶಪಾಂಡೆ, ಕೆಜೆಜಿ- ಕೆಜೆ ಜಾರ್ಜ್, ಹೆಚ್ ಎಂ-ಹೆಚ್ ಮಹದೇವಪ್ಪ, ಎಐಸಿಸಿ- ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ, ಎಸ್ ಜಿ- ಸೋನಿಯಾ ಗಾಂಧಿ ಎಂಬ ಇನಿಶಿಯಲ್ ಗಳು ಹಾಗೂ ಅದರ ಮುಂಭಾಗದಲ್ಲಿ ಯಾವ ತಿಂಗಳಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಹಣ ಕಳಿಸಲಾಗಿದೆ ಎಂಬ ಮಾಹಿತಿಯನ್ನು ಬರೆದಿರುವ ಡೈರಿಯ ಪುಟಗಳು ಮಾಧ್ಯಮಗಳಿಗೆ ಲಭ್ಯವಾಗಿದೆ. 
ಡೈರಿಯಲ್ಲಿ ಕೆಲವು ಅಧಿಕಾರಿಗಳ ಹೆಸರಿಗೆ ಹೋಲಿಕೆಯಾಗುವ ಇನಿಶಿಯಲ್ ಗಳೂ ಸಹ ನಮೂದಾಗಿದ್ದು, ಸ್ಟೀಲ್ ಬ್ರಿಡ್ಜ್ ನಿಂದ 65 ಕೋಟಿ ರೂಪಾಯಿ ಹಣ ಹೈಕಮಾಂಡ್ ಗೆ ಹೋಗಿರುವುದೂ ಸ್ಪಷ್ಟವಾಗಿದೆ. ಡೈರಿಯಲ್ಲಿರುವ ಮಾಹಿತಿಯ ಪ್ರಕಾರವಾಗಿ ಕೆಜೆಜಿ, ಡಿಕೆಎಸ್, ಹೆಚ್ಎಂ, ಆರ್ ವಿಡಿ, ಎಸ್ ಬಿ- , ರಘು ಸೇರಿದಂತೆ ಹಲವು ಮಂದಿಯಿಂದ ಒಟ್ಟು 629 ಕೋಟಿ ರೂಪಾಯಿ ಪಡೆದು ಎಐಸಿಸಿಗೆ 450 ಕೋಟಿ ರೂಪಾಯಿ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 
ಡೈರಿ ಪುಟಗಳು ಸೋರಿಕೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಲ್ ಸಿ ಗೋವಿಂದರಾಜು ಈ ಡೈರಿ ಹಾಗೂ ಅದರಲ್ಲಿರುವ ಕೈಬರಹ ಎರಡೂ ನನ್ನದಲ್ಲ ಎಂದು ಹೇಳಿದ್ದರೆ, ಕಾಂಗ್ರೆಸ್ ನಾಯಕರು ಡೈರಿಯಲ್ಲಿರುವ ಸಂಕೇತಾಕ್ಷರಗಳಿಗೂ ತಮ್ಮ ಹೆಸರುಗಳಿಗೂ ಸಂಬಂಧವಿಲ್ಲ. ಈ ಬಗ್ಗೆ ಬೇಕಾದರೆ ಸಿಬಿಐ ತನಿಖೆಗೂ ಸಿದ್ಧ ಎಂದು ಹೇಳುತ್ತಿದ್ದಾರೆ.       

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com