
ಬೆಂಗಳೂರು: ಫೆಬ್ರವರಿ 26 ರಿಂದ ಸುಮಾರು 2 ತಿಂಗಳ ಕಾಲ ನೃಪತುಂಗ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಆದರೆ ಬಿಎಂಟಿಸಿ ಬಸ್ ಮತ್ತು ಸರ್ಕಾರಿ ಅಧಿಕಾರಿಗಳ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಕೆ. ಆರ್ ಸರ್ಕಲ್ ನಿಂದ ಕಬ್ಬನ್ ಪಾರ್ಕ್ ಮಾರ್ಗವಾಗಿ ಹಡ್ಸನ್ ಸರ್ಕಲ್ ಗೆ ಉಳಿದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
ಬೆಂಗಳೂರಿನ 7 ಪ್ರಮುಖ ರಸ್ತೆಗಳಲ್ಲಿ ಬಿಬಿಎಂಪಿ ಮೊದಲನೇ ಹಂತದ ಟೆಂಡರ್ ಶ್ಯೂರ್ ಯೋಜನೆ ಸಂಬಂಧ ಅಂತಿಮ ಹಂತದ ಕಾಮಗಾರಿಗಳನ್ನು ಬಿಬಿಎಂಪಿ ಆರಂಭಿಸಿದೆ.
ನೃಪತುಂಗ ರಸ್ತೆ 2ನೇ ಹಂತದ ಕಾಮಗಾರಿಗೆ ಒಳಪಟ್ಟಿದೆ. ಈ ರಸ್ತೆಯಲ್ಲಿ ಯಾವಾಗಲು ಸಂಟಾರ ದಟ್ಟಣೆಯಿದ್ದು ಜನನಿಬಿಡ ಪ್ರದೇಶವಾಗಿದೆ. ಪೂರ್ವ ಹಾಗೂ ದಕ್ಷಿಣ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಸೋಮವಾರದಿಂದ ಕೆಲಸ ಆರಂಭವಾಗಲಿದ್ದು, ಒಂದೂವರೆ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ನೃಪತುಂಗ ರಸ್ತೆಯನ್ನು ಎರಡು ಭಾಗವಾಗಿ ವಿಭಾಗ ಮಾಡಿ, ಒಂದು ಭಾಗದ ರಸ್ತೆಯಲ್ಲಿ ಬಿಎಂಟಿಸಿ ಬಸ್ ಮತ್ತು ಸರ್ಕಾರಿ ಅಧಿಕಾಗಿಳ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗುವುದು. ದ್ವಿಚಕ್ರ ವಾಹನ ಹಾಗೂ ಕಾರು ಮತ್ತು ಆಟೋ ರಿಕ್ಷಾ ಗಳು ಕೆಆರ್ ಸರ್ಕಲ್ ನಿಂದ ಕಬ್ಬನ್ ಪಾರ್ಕ್ ಒಳಗಿಂದ( ಸೆಂಚುರಿ ಕ್ಲಬ್ ಸೆಂಟ್ರಲ್ ಲೈಬ್ರರಿ ಮುಖಾಂತರ) ಹಡ್ಸನ್ ಸರ್ಕಲ್ ತಲುಪಲು ವ್ಯವಸ್ಥೆ ಮಾಡಲಾಗುವುದು, ಭಾನುವಾರ ಕೂಡ ಕಬ್ಬನ್ ಪಾರ್ಕ್ ನಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇಲ್ಲಿಯವರೆಗೆ ಕಬ್ಬನ್ ಪಾರ್ಕ್ ನಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದ ವಕೀಲರಿಗೆ ಬನ್ನಪ್ಪ ಪಾರ್ಕ್ ನಲ್ಲಿ ಪಾರ್ಕಿಂಗ್ ಮಾಡುವಂತೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.
Advertisement