
ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಖಾಲಿ ಇರುವ ರಿಜಿಸ್ಟ್ರಾರ್ -ಅಡ್ಮಿನಿಸ್ಟ್ರೇಷನ್ ಹುದ್ದೆಗೆ ಸಿಎಂ ಸಿದ್ದರಾಮಯ್ಯ ಮೂರು ಮಂದಿ ಪ್ರೊಫೆಸರ್ ಗಳಿಗೆ ಶಿಫಾರಸು ಪತ್ರ ನೀಡಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 3 ಶಿಫಾರಸು ಪತ್ರಗಳು ಬಂದಿವೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ಮೂರು ಪತ್ರಗಳಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಟರ್ ಹೆಡ್, ಅಧಿಕೃತ ಸಹಿ ಇರುವುದನ್ನು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಮೊದಲಿಗೆ ಪ್ರೊ.ಡಾ ಜನಾರ್ದನಂ, ಎರಡನೇ ಬಾರಿಗೆ ಪ್ರೊ. ರಾಮಚಂದ್ರಗೌಡ, ಹಾಗೂ ಮೂರನೇ ಬಾರಿಗೆ ಅಂದರೆ ಇತ್ತೀಚೆಗೆ ಪ್ರೊ. ಬಿ.ಕೆ ರವಿ ಅವರಿಗೆ ಸಿಎಂ ಸಿದ್ದರಾಮಯ್ಯ ಶಿಫಾರಸು ಪತ್ರ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೂರು ಪತ್ರಗಳಿಂದ ಗೊಂದಲಗೊಂಡಿ ಸಿಬ್ಬಂದಿ ಪತ್ರಗಳನ್ನು ಉನ್ನತ ಶಿಕ್ಷಣ ಸಚಿವರಿಗೆ ರವಾನಿಸಿದ್ದಾರೆ. ಏಪ್ರಿಲ್ ನಲ್ಲಿ ಸದ್ಯ ಅಧಿಕಾರದಲ್ಲಿರುವ ರಿಜಿಸ್ಟ್ರಾರ್ ನಿವೃತ್ತಿಯಾಗಲಿದ್ದಾರೆ, ಉನ್ನತ ಶಿಕ್ಷಣ ಸಚಿವರ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪ್ರೊ.ಕೆ.ಎನ್ ನಿಂಗೇಗೌಡ ಸದ್ಯ ವಿವಿಯ ರಿಜಿಸ್ಟ್ರಾರ್ ಆಗಿದ್ದಾರೆ, ಏಪ್ರಿಲ್ 30 ರಂದು ನಿಂಗೇಗೌಡ ಅವರು ನಿವೃತ್ತರಾಗಲಿದ್ದಾರೆ.
ಅವರ ಸಹೋದ್ಯೋಗಿಗಳಾಗಿರುವ ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ನಿರ್ದೇಶಕ ಡಾ. ಜನಾರ್ಧನಂ, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಬಿ.ಕೆ ರವಿ ಮತ್ತು ವಾಣಿಜ್ಯ ಇಲಾಖೆ ಪ್ರೊ. ರಾಮಚಂದ್ರಗೌಡ ಅವರು ಈ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.
ನಮಗೆ ಇನ್ನೂ ಅರ್ಥವಾಗಿಲ್ಲ, ಇರುವ ಒಂದು ಹುದ್ದೆಗೆ ಮುಖ್ಯಮಂತ್ರಿಗಳು ಹೇಗೆ ಮೂರು ಶಿಫಾರಸು ಪತ್ರ ನೀಡಿದರು ಎಂಬ ಬಗ್ಗೆ ನಮಗೆ ಅಚ್ಚರಿಯಾಗೂತ್ತಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಕಾರ್ಯಾಲಯವನ್ನು ಸಂಪರ್ಕಿಸಿದಾಗ, ಪ್ರತಿನಿತ್ಯ ಸಹಿ ಮಾಡುವಂತೆ ಇದಕ್ಕೂ ಸಿಎಂ ಸಹಿ ಮಾಡಿರಬೇಕು ಎಂದು ತಿಳಿಸಿದೆ. ವಿವಿಯ ಮುಖ್ಯ ಹುದ್ದೆಗಳಿಗೆ ಸಿಎಂ ಶಿಫಾರಸು ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಶಿಫಾರಸು ಪತ್ರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement