ಶಾಸಕ ರಾಜು ಕಾಗೆ ಸಂಬಂಧಿಕರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; 13 ಮಂದಿ ವಿರುದ್ಧ ಕೇಸ್

ಬೆಳಗಾವಿ ಜಿಲ್ಲೆ ಕಾಗವಾಡ ಬಿಜೆಪಿ ಶಾಸಕ ರಾಜು ಕಾಗೆ ಅವರ ಮಗಳ ವಿರುದ್ಧ ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಕಾಮೆಂಟ್...
ವಿವೇಕ್ ಶೆಟ್ಟಿ
ವಿವೇಕ್ ಶೆಟ್ಟಿ
ಬೆಳಗಾವಿ: ಬೆಳಗಾವಿ ಜಿಲ್ಲೆ ಕಾಗವಾಡ ಬಿಜೆಪಿ ಶಾಸಕ ರಾಜು ಕಾಗೆ ಅವರ ಮಗಳ ವಿರುದ್ಧ ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಕಾಮೆಂಟ್ ಪೋಸ್ಟ್ ಮಾಡಿದ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಗೆ ಸಹೋದರ ಸೇರಿದಂತೆ 11 ಮಂದಿ ಸಂಬಂಧಿಕರು ವಿವೇಕ್ ಶೆಟ್ಟಿ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 
ಈ ಸಂಬಂಧ ಸೋಮವಾರ ಕಾಗವಾಡ ಠಾಣೆ ಪೊಲೀಸರು ಶಾಸಕ ರಾಜು ಕಾಗೆ ಹಾಗೂ ಅವರ ಸೋದ ರಸಿದ್ದಗೌಡ ಕಾಗೆ ಮತ್ತು ಮಗಳು ಸೇರಿದಂತೆ 13 ಮಂದಿ ವಿರುದ್ಧ ಗೂಂಡಾ ಕಾಯ್ಡೆಯಡಿ ಕೇಸ್ ದಾಖಲಿಸಿದ್ದಾರೆ.
ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಕಾಮೆಂಟ್ ಪೋಸ್ಟ್ ಮಾಡಿದ ಎನ್ನುವ ಕಾರಣಕ್ಕ ಶಾಸಕರ ಸಂಬಂಧಿಗಳು ಉಗಾರದ ಯುವಕನ ಮನೆಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳಿಂದ ಹೊಡೆದು, ಮೆಟ್ಟಿಲುಗಳ ಮೆಲೆ ಎಳೆದೊಯ್ದು ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ವಿವೇಕ್ ಅವರ ತಾಯಿ ಉಜ್ವಾಲ ಶೆಟ್ಟಿ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಜನವರಿ 1ರಂದು ಈ ಘಟನೆ ನಡೆದಿದ್ದು, ವಿವೇಕ್ ಶೆಟ್ಟಿ ಹಾಗೂ ತಾಯಿ ಮೀರಜ್ ನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವೇಕ್ ಶೆಟ್ಟಿಯನ್ನು ಮನೆಯಿಂದ ದರ, ದರ ಎಳೆತಂದು, ರಾಜು ಕಾಗೆ ಅವರ ಗೋದಾಮಿನಲ್ಲಿ ಮನಸ್ಸಿಗೆ ಬಂದಂತೆ ಥಳಿಸಿರುವುದಾಗಿ ವಿವೇಕ್ ಶೆಟ್ಟಿ ಆರೋಪಿಸಿದ್ದಾರೆ.
ಹೊಸ ವರ್ಷದ ಮೊದಲ ದಿನ ಈ ಘಟನೆ ನಡೆದಿದ್ದು, ಶಾಸಕ ರಾಜು ಕಾಗೆ ಅವರ ಗೂಂಡಾಗಿರಿಗೆ ಹೆದರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂದು ವಿವೇಕ್ ಶೆಟ್ಟಿ ತಿಳಿಸಿದ್ದಾರೆ.
ವಿವೇಕ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮಾಧ್ಯಮಗಳಲ್ಲಿ ಬೆಳಕಿಗೆ ಬರುತ್ತಿದ್ದಂತೆಯೇ ಪಿಎಸ್ಐ ಆನಂದ್ ಡೋಣಿ ಅವರು ಮೀರಜ್ ಆಸ್ಪತ್ರೆಗೆ ತೆರಳಿ ದೂರು ಪಡೆದಿದ್ದು, ರಾಜು ಕಾಗೆ ಹಾಗೂ ಕುಟುಂಬದ ವಿರುದ್ಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಗೂಂಡಾಗಿರಿ ಕಾಯ್ದೆಯಡಿ ಮೊಕದ್ದಮೆ ದಾಖಲು ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. 
ಈ ಪ್ರಕರಣದಲ್ಲಿ  ಶಾಸಕ ರಾಜು ಕಾಗೆ 12ನೇ ಆರೋಪಿ ಎಂದು ಹೆಸರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com