ಕಸವಿಲೇವಾರಿಯಲ್ಲಿ ಅಕ್ರಮ: ಬಿಬಿಎಂಪಿಯಿಂದ ಗುತ್ತಿಗೆದಾರರಿಗೆ 400 ಕೋಟಿ ರು. ಹೆಚ್ಚುವರಿ ಹಣ ಪಾವತಿ

ಕಸ ಗುತ್ತಿಗೆದಾರರಿಗೆ ಬೆಂಗಳೂರು ಮಹಾನಗರ ಪಾಲಿಕೆ 400 ಕೋಟಿ ರು. ಹೆಚ್ಚುವರಿ ಹಣ ಪಾವತಿಸಿದೆ, ಈ ಸಂಬಂಧ ಸಿಬಿಐ ತನಿಖೆ ನಡೆಯಬೇಕು ಎಂದು ಬಿಬಿಎಂಪಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಸ ಗುತ್ತಿಗೆದಾರರಿಗೆ ಬೆಂಗಳೂರು ಮಹಾನಗರ ಪಾಲಿಕೆ  400 ಕೋಟಿ ರು. ಹೆಚ್ಚುವರಿ ಹಣ ಪಾವತಿಸಿದೆ, ಈ ಸಂಬಂಧ ಸಿಬಿಐ ತನಿಖೆ ನಡೆಯಬೇಕು ಎಂದು ನಗರ ಬಿಜೆಪಿ ವಕ್ತಾರ ಎನ್‌.ಆರ್‌.ರಮೇಶ್‌ ಒತ್ತಾಯಿಸಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಸ ವಿಲೇವಾರಿ ಗುತ್ತಿಗೆಯಲ್ಲಿ ಭಾರಿ ಅಕ್ರಮ ನಡೆದಿದೆ. ಕಪ್ಪು ಪಟ್ಟಿಗೆ ಸೇರಿಸಲಾದ ಗುತ್ತಿಗೆದಾರರು ಬೇನಾಮಿ ಹೆಸರಿನಲ್ಲಿ ಮತ್ತೆ ಗುತ್ತಿಗೆ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

2016-17 ರಲ್ಲಿ ಘನ ತ್ಯಾಜ್ಯ ವಿಲೇವಾರಿಗಾಗಿ  ಬಿಬಿಎಂಪಿ 659 ಕೋಟಿ ರು. ವೆಚ್ಚ ಮಾಡಿತ್ತು, ಅದರಲ್ಲಿ 555 ಕೋಟಿಗಳನ್ನು ಕಸಗುತ್ತಿಗೆದಾರರಿಗೆ ನೀಡಲಾಗಿದೆ.

ಕಸ ವಿಲೇವಾರಿ ಗುತ್ತಿಗೆದಾರರಿಗೆ ನೀಡಿದ್ದ ಕಾರ್ಯಾದೇಶ ಪತ್ರವನ್ನು ರದ್ದುಪಡಿಸಿ ಇಲಾಖೆ ವತಿಯಿಂದಲೇ ಇದನ್ನು ನಿರ್ವಹಿಸಬೇಕು ಎಂದು ಹೈಕೋರ್ಟ್‌ 2015ರ ಸೆಪ್ಟೆಂಬರ್‌ನಲ್ಲಿ ಆದೇಶ ನೀಡಿತ್ತು. ಆದರೆ ಬಿಬಿಎಂಪಿ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಗುತ್ತಿಗೆದಾರರಿಗೆ ಕಂಟ್ರ್ಯಾಕ್ಟ್ ನೀಡಿದ್ದಾರೆ.
 
2016 ರ ಫೆಬ್ರವರಿಗೆ ಮೊದಲು ಇದೇ ಕೆಲಸಕ್ಕೆ ಬಿಬಿಎಂಪಿ 385 ಕೋಟಿ ರು ಖರ್ಚು ಮಾಡಿತ್ತು. 2017ರ ಫೆಬ್ರವರಿ ವೇಳೆಗೆ ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿಯ ವೆಚ್ಚ 856 ಕೋಟಿ ರು.ಗೆ ಏರಲಿದೆ. ಇದರಲ್ಲಿ 752 ಕೋಟಿ ರು.ಗಳನ್ನು ಗುತ್ತಿಗೆದಾರರಿಗೆ ನೀಡಲಾಗುತ್ತಿದೆ.

ಹೈಕೋರ್ಟ್ ಕಪ್ಪು ಪಟ್ಟಿಗೆ ಸೇರಿಸಿದ್ದ ಗುತ್ತಿಗೆದಾರರ ಹೆಸರು ಬದಲಾಯಿಸಿ, ಪಾಲಿಕೆ ಅದೇ ಗುತ್ತಿಗೆದಾರರಿಗೆ ಗುತ್ತಿಗೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಪಾಲಿಕೆಯಲ್ಲಿ 2,734 ಮಂದಿ ಕಾಯಂ  ಪೌರಕಾರ್ಮಿಕರಿದ್ದಾರೆ. ದಾಖಲೆಗಳ ಪ್ರಕಾರ 22,176 ಮಂದಿ ಗುತ್ತಿಗೆ ಪೌರ ಕಾರ್ಮಿಕರರಿಗೆ ಕೂಲಿ ಪಾವತಿ ಆಗುತ್ತಿದೆ. ಆದರೆ ವಾಸ್ತವವಾಗಿ ಇಷ್ಟು ಸಂಖ್ಯೆಯಲ ಅವರು ಕಾರ್ಯ ನಿರ್ವಹಿಸುತ್ತಿಲ್ಲ. ಈ ಪೈಕಿ ಶೇಕಡಾ 30ರಷ್ಟು ಮಂದಿ ಮಾತ್ರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಿಜವಾಗಿ ಪಾವತಿ ಆಗಬೇಕಿರುವ ಮೊತ್ತಕ್ಕಿಂತ ರು. 400 ಕೋಟಿಯಷ್ಟು ಮೊತ್ತ ಹೆಚ್ಚುವರಿಯಾಗಿ ಪಾವತಿ ಆಗುತ್ತಿದೆ’ ಎಂದು ಆರೋಪಿಸಿದರು.

ಕಾರ್ಮಿಕರ ಭವಿಷ್ಯನಿಧಿ ಹಾಗೂ ಉದ್ಯೋಗಿಗಳ ರಾಜ್ಯ ವಿಮೆ ಉದ್ಯೋಗಿಗಳ ರಾಜ್ಯ ವಿಮೆ (ಇಎಸ್‌ಐ)  ಖಾತೆಗೆ ತುಂಬ ಬೇಕಿದ್ದ ರು. 5.76 ಕೋಟಿ ಮೊತ್ತವನ್ನು ಬಿಬಿಎಂಪಿ ಬಾಕಿ ಉಳಿಸಿಕೊಂಡಿದೆ’ ಎಂದು ಆರೋಪಿಸಿದ ಅವರು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಮಾಫಿಯಾ ಹಿಂದೆ ಬಿಬಿಎಂಪಿ ಆಯುಕ್ತರು ಹಾಗೂ ಅಧಿಕಾರಿಗಳ ಕೈವಾಡವಿದೆ, ಈ ದೂರಿನ ಪ್ರತಿಯನ್ನು ಪ್ರಧಾನ ಮಂತ್ರಿಗಳ ಕಚೇರಿಗೂ ರವಾನಿಸಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com