ಐಸಿಐಸಿಐ ಬ್ಯಾಂಕ್
ರಾಜ್ಯ
ಕನ್ನಡದಲ್ಲಿ ಬರೆದಿದ್ದಕ್ಕೆ ಚೆಕ್ ಸ್ವೀಕರಿಸಲು ನಕಾರ: ಐಸಿಐಸಿಐ ಬ್ಯಾಂಕ್ ವಿರುದ್ಧ ಮೊಕದ್ದಮೆ ದಾಖಲು!
ಚೆಕ್ ನ್ನು ಕನ್ನಡ ಭಾಷೆಯಲ್ಲಿ ತುಂಬಿದ ಕಾರಣವನ್ನಿಟ್ಟುಕೊಂಡು ಸ್ವೀಕರಿಸಲು ನಿರಾಕರಿಸಿದ ಐಸಿಐಸಿಐ ಬ್ಯಾಂಕ್ ನ್ನು ಕೋರ್ಟ್ ಮುಂದೆ ನಿಲ್ಲಿಸಲಾಗಿದೆ.
ಬೆಳಗಾವಿ: ಚೆಕ್ ನ್ನು ಕನ್ನಡ ಭಾಷೆಯಲ್ಲಿ ತುಂಬಿದ ಕಾರಣವನ್ನಿಟ್ಟುಕೊಂಡು ಸ್ವೀಕರಿಸಲು ನಿರಾಕರಿಸಿದ ಐಸಿಐಸಿಐ ಬ್ಯಾಂಕ್ ನ್ನು ಕೋರ್ಟ್ ಮುಂದೆ ನಿಲ್ಲಿಸಲಾಗಿದೆ.
ಆನಂದ್ ದಿವಾಕರ್ ಗರಗ್ ಐಸಿಐಸಿಐ ಬ್ಯಾಂಕ್ ವಿರುದ್ಧ ಬೆಳಗಾವಿಯ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ವಿಮೆಯ ಕಂತು ಪಾವತಿ ಮಾಡಲು ನವೆಂಬರ್ ತಿಂಗಳಲ್ಲಿ 17,220 ರೂ ಗಳ ಚೆಕ್ ನ್ನು ಕನ್ನಡ ಭಾಷೆಯಲ್ಲಿ ತುಂಬಿ ನೀಡಲಾಗಿತ್ತು. ಎಲ್ಐಸಿ ತನ್ನ ಬ್ಯಾಂಕ್ ಖಾತೆಯನ್ನು ನಿರ್ವಹಿಸುವ ಕಾರ್ಪೊರೇಷನ್ ಬ್ಯಾಂಕ್ ಗೆ ಚೆಕ್ ನ್ನು ಕಳಿಸಿ ನಂತರ ಅದು ಐಸಿಐಸಿಐ ಬ್ಯಾಂಕ್ ಗೆ ಸೇರಿದೆ. ಆದರೆ ಐಸಿಐಸಿಐ ಬ್ಯಾಂಕ್ ಚೆಕ್ ನ್ನು ಕನ್ನಡದಲ್ಲಿ ತುಂಬಲಾಗಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ನಗದು ಪಾವತಿ ಮಾಡಲು ನಿರಾಕರಿಸಿದೆ.
ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸುವುದಕ್ಕೂ ಮುನ್ನ ಚೆಕ್ ನ್ನು ವಾಪಸ್ ಕಳಿಸಿರುವ ಬಗ್ಗೆ ಐಸಿಐಸಿಐ ಬ್ಯಾಂಕ್ ಹಾಗೂ ಎಲ್ಐಸಿಯಿಂದ ಸ್ಪಷ್ಟನೆ ಕೇಳಿದ್ದ ಆನಂದ್ ದಿವಾಕರ್ ಗೆ ಕನ್ನಡದಲ್ಲಿ ಚೆಕ್ ನ್ನು ತುಂಬಿದ್ದರಿಂದ ವಾಪಸ್ ಕಳಿಸಲಾಗಿದೆ ಎಂಬ ಉತ್ತರ ಬಂದಿದೆ. ನಂತರ ಆನಂದ್ ದಿವಾಕರ್ ಗರಗ್ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ಕೋರ್ಟ್ ಈಗ ಎಲ್ಐಸಿ, ಐಸಿಐಸಿಐ, ಕಾರ್ಪೊರೇಷನ್ ಬ್ಯಾಂಕ್ ಗಳಿಗೆ ನೊಟೀಸ್ ಜಾರಿ ಮಾಡಿ ವಿಚಾರಣೆಯನ್ನು ಫೆ.28 ಕ್ಕೆ ಮುಂದೂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮೂಲಕ ತಿಳಿದುಬಂದಿದೆ.
ಐಸಿಐಸಿಐ ಬ್ಯಾಂಕ್ ಸ್ಪಷ್ಟನೆ: ಪ್ರಕರಣದ ಬಗ್ಗೆ ಐಸಿಐಸಿಐ ಬ್ಯಾಂಕ್ ಸ್ಪಷ್ಟನೆ ನೀಡಿದ್ದು, ಆರ್ ಬಿಐ ನಿಯಮಾವಳಿಗಳ ಪ್ರಕಾರ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ಚೆಕ್ ನ್ನು ಸ್ವೀಕರಿಸುತ್ತೇವೆ. ಕೆಲವೊಮ್ಮೆ ಹಣವನ್ನು ನೀಡುವ ಬ್ಯಾಂಕ್ ಗೆ ಚೆಕ್ ನ್ನು ಕಳಿಸುವ ಬದಲು ಸಿಟಿಎಸ್ ವ್ಯವಸ್ಥೆ ಮೂಲಕ ಚೆಕ್ ನ ಚಿತ್ರವನ್ನು ಕಳಿಸುತ್ತೇವೆ. ಚಿತ್ರ ಸ್ಪಷ್ಟವಾಗಿಲ್ಲದೇ ಇದ್ದರೆ ಚೆಕ್ ನೀಡಿದ್ದ ಬ್ಯಾಂಕ್ ಗೆ ಚಿತ್ರದ ಬದಲು ಚೆಕ್ ನ್ನು ಕಳಿಸಲು ಸೂಚಿಸಲಾಗುತ್ತದೆ. ಈ ಪ್ರಕರಣದಲ್ಲೂ ಇದೇ ರೀತಿಯಾಗಿದ್ದು ಚಿತ್ರ ಸ್ಪಷ್ಟವಾಗಿಲ್ಲದ ಕಾರಣ ಚೆಕ್ ನ್ನು ಕಳಿಸಿ ಎಂದು ಮನವಿ ಮಾಡಲಾಗಿತ್ತು. ಆದರೆ ಕನ್ನಡದಲ್ಲಿ ಬರೆದಿದ್ದಕ್ಕಾಗಿ ಸ್ವೀಕರಿಸಲಾಗಿಲ್ಲ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಬ್ಯಾಂಕ್ ನ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ